ಅ.30ರಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಮಂಗಳೂರು, ಅ.28: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ವತಿಯಿಂದ ಅ.30ರಂದು ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಹಿರಿಯ ಸಾಹಿತಿ, ರಂಗಕರ್ಮಿ ಡಾ.ನಾ.ದಾಮೋದರ ಶೆಟ್ಟಿ ಸಮ್ಮೇಳನಾಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ದಿನವಿಡೀ ನಡೆಯಲಿವೆ. ಬೆಳಗ್ಗೆ 9 ಗಂಟೆಗೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ನೆರವೇರಿಸುವರು. ಸಮ್ಮೇಳನದ ಧ್ವಜಾರೋಹಣವನ್ನು ಕಸಾಪ ಮಂಗಳೂರು ಘಟಕದ ಅಧ್ಯಕ್ಷ ಡಾ.ಮಂಜುನಾಥ ಶ್ರೀಪಾದ ರೇವಣ್ಕರ ನೆರವೇರಿಸಲಿದ್ದಾರೆ. ಬಳಿಕ 9:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ.ಮಂಜುನಾಥ ರೇವಣಕರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಮಹೇಶ್ ಎಂ.ಜೋಷಿ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಶಾಸಕರ ವೇದವ್ಯಾಸ ಕಾಮತ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಅದಾನಿ ಗ್ರೂಪ್‌ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಮುಂತಾದವರು ಭಾಗವಹಿಸುವರು. ಸಮ್ಮೇಳನದಲ್ಲಿ ವಿಚಾರಗೋಷ್ಠಿ, ವಿಶೇಷ ಉಪನ್ಯಾಸ, ಕವಿಗೋಷ್ಠಿಗಳೊಂದಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಡಾ.ಅಜಕ್ಕಳ ಗಿರೀಶ್ ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ರೇವಣಕರ ವಿವರಿಸಿದರು.
ಪೂರ್ವಾಹ್ನ 11 ಗಂಟೆಯಿಂದ 12ರವರೆಗೆ ಸಾಹಿತ್ಯ ಮತ್ತು ರಂಗಭೂಮಿ ವಿಷಯದ ಬಗ್ಗೆ ರವಿರಾಜ್ ಎಸ್., ರಂಗಭೂಮಿ ಮತ್ತು ಯುವಜನತೆ ವಿಷಯದಲ್ಲಿ ಶಶಿಧರ ಬಾರಿಘಾಟ್, ತುಳು ರಂಗಭೂಮಿ ವಿಷಯದಲ್ಲಿ ಅಕ್ಷಯ ಆರ್. ಶೆಟ್ಟಿ ಗೋಷ್ಠಿ ನಡೆಸಲಿದ್ದಾರೆ. ಅರವಿಂದ ಚೊಕ್ಕಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. 12ರಿಂದ 12:30ರವರೆಗೆ ರಂಗಭೂಮಿಯಲ್ಲಿ ಹಾಸ್ಯ ವಿಷಯದ ಬಗ್ಗೆ ರಾಮನಾಥ ಮಾತನಾಡಲಿದ್ದಾರೆ. 12:30ರಿಂದ 1 ಗಂಟೆಯವರೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದೆ. 1:15ರಿಂದ 1:30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. 1:30ರಿಂದ 2:30ರವರೆಗೆ ಕವಿಗೋಷ್ಠಿ ಜರುಗಲಿದೆ. 2:30ರಿಂದ 2:45ರವರೆಗೆ ಮೈಮ್ ರಾಮದಾಸ್ ಅವರಿಂದ ರಂಗ ಗೀತೆಗಳು ಜರುಗಲಿದೆ. 2.45ರಿಂದ 3ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. 3 ಗಂಟೆಯಿಂದ 3:45ರವರೆಗೆ ಸಾಧಕರಿಗೆ ಸನ್ಮಾನ, 3:45 ರಿಂದ 4 ಗಂಟೆವರೆಗೆ ವಿದ್ಯಾರ್ಥಿಗಳಿಗೆ ಪುರಸ್ಕಾರ, 4 ಗಂಟೆಯಿಂದ 5.30ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಮಂಗಳೂರು ಘಟಕದ ಕಾರ್ಯದರ್ಶಿ ಡಾ.ಮುರಲೀ ಮೋಹನ ಚೂಂತಾರು, ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ ಜೀ, ಕೋಶಾಧಿಕಾರಿ ಎನ್. ಸುಬ್ರಾಯ ಭಟ್, ಸದಸ್ಯೆ ಡಾ.ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು.