ಅ.29: ಸಂತ ಅಲೋಶಿಯಸ್ ಕಾಲೇಜಿನಲ್ಲಿ 'ಗಾಂಧಿಯನ್ನು ಅರ್ಥೈಸಿಕೊಳ್ಳುವುದು' ರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು, ಅ.28: ನಗರದ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಇದರ ರಾಜ್ಯಶಾಸ್ತ್ರ ವಿಭಾಗವು ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ‘ಗಾಂಧಿಯನ್ನು ಅರ್ಥೈಸಿಕೊಳ್ಳುವುದು’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅಕ್ಟೋಬರ್ 29ರಂದು ಆಯೋಜಿಸಲಾಗಿದೆ.
ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ಬೆಳಗ್ಗೆ 9:30ಕ್ಕೆ ಮಾಜಿ ಶಿಕ್ಷಣ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ.ಫಾ.ಮೆಲ್ವಿನ್ ಜೆ.ಪಿಂಟೋ ಎಸ್.ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ 3 ಗೋಷ್ಠಿಗಳು ನಡೆಯಲಿವೆ. ಬೆಂಗಳೂರಿನ ಐಎಸ್‌ಇಸಿಯ ರಾಮಕೃಷ್ಣ ಹೆಗಡೆ ಚೇರ್‌ನ ನಿರ್ದೇಶಕ ಪ್ರೊ. ಚಂದನ್ ಗೌಡ ಅವರು ಮೊದಲ ಗೋಷ್ಠಿಯಲ್ಲಿ ಹಿಂದ್ ಸ್ವರಾಜ್: ಒಂದು ವಿಮರ್ಶೆಕುರಿತು ಮಾತನಾಡಲಿದ್ದಾರೆ. 2ನೇ ಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರೊ.ಕೆ.ಎಂ.ಲೋಕೇಶ್ ಅವರು ಗಾಂಧಿ ಮತ್ತು ರಾಷ್ಟ್ರವಾದಿ ಚಳವಳಿ ಮತು ಸಹ್ಯಾದ್ರಿ ಕಲಾ ಕಾಲೇಜು, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗದ ಪ್ರೊ. ಮೇಟಿ ಮಲ್ಲಿಕಾರ್ಜುನ್ ಇವರು ಗಾಂಧಿ ಮತ್ತು ಭಾಷಾ ಪ್ರಶ್ನೆ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾನಿಲಯ, ಕಲಬುರಗಿ ಇದರ ಸಾರ್ವಜನಿಕ ಆಡಳಿತ ವಿಭಾಗದ ಡಾ. ಕಿರಣ್ ಎಂ. ಗಾಜನೂರ್ ಅವರಿಂದ 3ನೇ ಗೋಷ್ಠಿಯು ಗಾಂಧಿ ಮತ್ತು ಪರ್ಯಾಯ ರಾಜಕೀಯ ಕುರಿತು ನಡೆಯಲಿದೆ.