ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಸ್ವಾಗತ: ಸಂಸದ ಕೆ.ಎಚ್.ಮುನಿಯಪ್ಪ
ಹೊಸದಿಲ್ಲಿ, ಅ. 28: ‘ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಸ್ವಾಗತಿಸುತ್ತೇನೆ. ನಾವೇ ಮುಂದೆ ನಿಂತು ಅವರ ಪರ ಪ್ರಚಾರ ಮಾಡುತ್ತೇವೆ. ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಸ್ಪತಂತ್ರರು. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ದಿಲ್ಲಿಯಲ್ಲಿ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಖುದ್ದು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಜಿಲ್ಲಾ ಕಾಂಗ್ರೆಸ್‍ನಲ್ಲಿನ ಭಿನ್ನಮತ ಮುಗಿದ ಅಧ್ಯಾಯ. ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ನುಡಿದರು.
‘ಪಕ್ಷದಲ್ಲಿನಕೆಲವು ನಾಯಕರ ಧೋರಣೆಯಿಂದಾಗಿ ನನಗೆ ಅಸಮಾಧಾನ ಆಗಿದ್ದು ನಿಜ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತುಕತೆ ನಡೆಸಿ ಎಲ್ಲ ಗೊಂದಲಗಳನ್ನು ಬಗೆಹರಿಸಿದ್ದಾರೆ. ನೀವು ಹೈಕಮಾಂಡ್‍ಗೆ ಹತ್ತಿರವಾಗಿರುವವರು. ಸಣ್ಣಪುಟ್ಟ ಸಮಸ್ಯೆಗಳಿಗೆ ಮುನಿಸಿಕೊಳ್ಳಬೇಡಿ’ ಎಂದು ಕಿವಿಮಾತು ಹೇಳಿದ್ದಾರೆಂದು ಮುನಿಯಪ್ಪ ತಿಳಿಸಿದರು.
ಅಸಮಾಧಾನ ಇಲ್ಲ: ‘ನನಗೆ ಕೋಲಾರ ಜಿಲ್ಲೆ ಮತ್ತು ಕೆಪಿಸಿಸಿ ಮುಖಂಡರ ಜೊತೆ ಯಾವುದೇ ರೀತಿಯ ಅಸಮಾಧಾನವೂ ಇಲ್ಲ. ಎಲ್ಲರೂ ಜತೆಗೂಡಿ ಪಕ್ಷ ಸಂಘಟನೆ ಮಾಡುತ್ತೇವೆ. ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಖ್ಯ ಉದ್ದೇಶ. ಆನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ' ಎಂದು ಮುನಿಯಪ್ಪ ಇದೇ ವೇಳೆ ಸ್ಪಷ್ಟಣೆ ನೀಡಿದರು.