26/11ರ ದಾಳಿಯ ರೂವಾರಿಗಳನ್ನು ನ್ಯಾಯದ ಕಟಕಟೆಗೆ ತರುವ ಕಾರ್ಯ ಅಪೂರ್ಣವಾಗಿದೆ:ಎಸ್.ಜೈಶಂಕರ್

ಹೊಸದಿಲ್ಲಿ,ಅ.28: ಮುಂಬೈನಲ್ಲಿ 2008ರಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗಳ ರೂವಾರಿಗಳನ್ನು ನ್ಯಾಯದ ಕಟಕಟೆಗೆ ತರುವ ಕಾರ್ಯ ಅಪೂರ್ಣವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್(S. Jaishankar) ಅವರು ಶುಕ್ರವಾರ ಇಲ್ಲಿ ಹೇಳಿದರು.
ಮುಂಬೈನ ಹೋಟೆಲ್ ತಾಜ್ ಪ್ಯಾಲೇಸ್(Taj Palace) ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯ ಎರಡು ದಿನಗಳ ವಿಶೇಷ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. 2008,ನ.28ರಂದು ಭಯೋತ್ಪಾದಕರ ದಾಳಿಗೆ ತುತ್ತಾಗಿದ್ದ ಸ್ಥಳಗಳಲ್ಲಿ ಹೋಟೆಲ್ ತಾಜ್ ಕೂಡ ಒಂದಾಗಿತ್ತು.
ದಾಳಿಯು ಮುಂಬೈಯನ್ನು ಮಾತ್ರ ಗುರಿಯಾಗಿಸಿಕೊಂಡಿರಲಿಲ್ಲ,ಅದು ಅಂತರರಾಷ್ಟ್ರೀಯ ಸಮುದಾಯವನ್ನೂ ಗುರಿಯಾಗಿಸಿಕೊಂಡಿತ್ತು ಎಂದು ಹೇಳಿದ ಜೈಶಂಕರ,ಹತ್ಯೆ ಮಾಡುವ ಮುನ್ನ ನಿರ್ದಿಷ್ಟ ದೇಶಗಳ ಪ್ರಜೆಗಳನ್ನು ಗುರುತಿಸಲಾಗಿತ್ತು. ಪರಿಣಾಮವಾಗಿ ಭಯೋತ್ಪಾದನೆಯನ್ನು ಎದುರಿಸಲು ವಿಶ್ವಸಂಸ್ಥೆಯ ಪ್ರತಿಯೊಂದು ಸದಸ್ಯ ರಾಷ್ಟ್ರದ ಬದ್ಧತೆಗೆ ಸಾರ್ವಜನಿಕವಾಗಿ ಸವಾಲೊಡ್ಡಲಾಗಿತ್ತು ಎಂದರು.
ಭದ್ರತಾ ಮಂಡಳಿಯು ‘ಭಯೋತ್ಪಾದಕರನ್ನು ಹೊಣೆಗಾರರನ್ನಾಗಿಸುವುದನ್ನು ಮತ್ತು ನ್ಯಾಯ ಒದಗಿಸುವುದನ್ನು ಜಾಗತಿಕ ಸಮುದಾಯವು ಎಂದಿಗೂ ಕೈಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಬೇಕಿದೆ ’ ಎಂದು ಜೈಶಂಕರ ಹೇಳಿದರು.
2008,ನ.28ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗವಾಗಿ ಮುಂಬೈ ಪ್ರವೇಶಿಸಿದ್ದ ಲಷ್ಕರೆ ತೈಬಾದ 10 ಭಯೋತ್ಪಾದಕರು ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಸಂಘಟಿತ ದಾಳಿಗಳನ್ನು ನಡೆಸಿದ್ದರು. 26 ವಿದೇಶಿಯರು ಸೇರಿದಂತೆ 166 ಜನರು ಈ ದಾಳಿಗಳಿಗೆ ಬಲಿಯಾಗಿದ್ದರು.
ದಾಳಿಗಳಲ್ಲಿ ಭಾಗಿಯಾಗಿದ್ದವರನ್ನು ಶಿಕ್ಷಿಸುವಂತೆ ಭಾರತವು ಪಾಕಿಸ್ತಾನವನ್ನು ನಿರಂತರವಾಗಿ ಒತ್ತಾಯಿಸುತ್ತಿದೆ. ಆದಾಗ್ಯೂ ಪಾಕಿಸ್ತಾನದಲ್ಲಿ ಲಷ್ಕರೆ ತೈಬಾದ ಸ್ಥಾಪಕ ಹಫೀಝ್ ಸಯೀದ್ ಸೇರಿದಂತೆ ಆರೋಪಿಗಳ ವಿಚಾರಣೆಯಲ್ಲಿ ಈವರೆಗೆ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ.
ಭಯೋತ್ಪಾದನೆ ಗಂಭೀರ ಬೆದರಿಕೆ
ಭಯೋತ್ಪಾದನೆಯು ಜಾಗತಿಕ ಶಾಂತಿ,ಭದ್ರತೆ ಮತ್ತು ಮಾನವೀಯತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಭಯೋತ್ಪಾದನೆ ನಿಗ್ರಹ ಸಮಿತಿಯನ್ನುದ್ದೇಶಿಸಿ ಮಾಡಿದ ಪ್ರತ್ಯೇಕ ಭಾಷಣದಲ್ಲಿ ಹೇಳಿದ ಜೈಶಂಕರ,‘ಇನ್ನೊಂದು ತಿಂಗಳಲ್ಲಿ 2008 ನವಂಬರ್ ನಲ್ಲಿ ಮುಂಬೈ ನಗರದ ಮೇಲೆ ನಡೆದಿದ್ದ ಭೀಕರ ದಾಳಿಗಳ 14ನೇ ವಾರ್ಷಿಕವನ್ನು ನಾವು ಆಚರಿಸಲಿದ್ದೇವೆ. ಓರ್ವ ಭಯೋತ್ಪಾದಕನ್ನು ಜೀವಂತವಾಗಿ ಸೆರೆ ಹಿಡಿದು,ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಶಿಕ್ಷೆಗೊಳಪಡಿಸಲಾಗಿತ್ತು. ಆದರೆ ದಾಳಿಗಳ ಪ್ರಮುಖ ಸಂಚುಕೋರರು ಮತ್ತು ಯೋಜಕರಿಗೆ ಈಗಲೂ ರಕ್ಷಣೆ ದೊರೆಯುತ್ತಿದೆ ಮತ್ತು ಅವರಿಗೆ ಯಾವುದೇ ಶಿಕ್ಷೆಯಾಗಿಲ್ಲ ’ ಎಂದರು.
ರಾಜಕೀಯ ಕಾರಣಗಳಿಂದಾಗಿ ಕೆಲವು ಭಯೋತ್ಪಾದಕರನ್ನು ನಿಷೇಧಿಸಲು ಭದ್ರತಾ ಮಂಡಳಿಗೆ ಸಾಧ್ಯವಾಗುತ್ತಿಲ್ಲ ಮತ್ತು ಇದು ಸಂಸ್ಥೆಯ ಸಾಮೂಹಿಕ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದರು.
ಹಫೀಝ್ ಸಯೀದ್ ಪುತ್ರ ತಲ್ಹಾ ಸಯೀದ್ನನ್ನು ಭಯೋತ್ಪಾದಕನೆಂದು ಘೋಷಿಸುವ ಭದ್ರತಾ ಮಂಡಳಿಯ ಪ್ರಯತ್ನಕ್ಕೆ ಕಳೆದ ವಾರ ಚೀನಾ ತಡೆಯನ್ನೊಡ್ಡಿತ್ತು. ಭಾರತದಲ್ಲಿ ಮತ್ತು ಅಫ್ಘಾನಿಸ್ತಾನದಲ್ಲಿ ಭಾರತೀಯ ಹಿತಾಸಕ್ತಿಗಳ ಮೇಲೆ ದಾಳಿಗಳನ್ನು ಕಾರ್ಯಗತಗೊಳಿಸುವುದರಲ್ಲಿ ತಲ್ಹಾ ಸಯೀದ್ ಭಾಗಿಯಾಗಿದ್ದಾನೆ ಎಂದು ಭಾರತದ ಗೃಹಸಚಿವಾಲಯವು ಆರೋಪಿಸಿದೆ.







