ಕಾಪು : ನನ್ನ ನಾಡು - ನನ್ನ ಹಾಡು ಸಮೂಹ ಗೀತೆ 'ಕೋಟಿ ಕಂಠ ಗಾಯನ'

ಕಾಪು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದ ವತಿಯಿಂದ ರಾಜ್ಯಾದ್ಯಂತ ಆಯೋಜಿಸಲಾದ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನನ್ನ ನಾಡು - ನನ್ನ ಹಾಡು ಸಮೂಹ ಗೀತೆ 'ಕೋಟಿ ಕಂಠ ಗಾಯನ' ಕಾರ್ಯಕ್ರಮವು ಶುಕ್ರವಾರ ಕಾಪು ತಾಲೂಕಿನಲ್ಲಿ ನಡೆಯಿತು.
ಕಾಪು ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ನಡೆದ ಕಾಯಕ್ರಮದಲ್ಲಿ ಕಾಪು ಪುರಸಭಾ ವ್ಯಾಪ್ತಿಯ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗುರುಚರಣ್ ಮಾರ್ಗದರ್ಶನದಲ್ಲಿ ಗೀತೆಗಳನ್ನು ಹಾಡಿದರು.
ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಅನ್ಯರಾಜ್ಯಗಳು ಗಡಿ ವಿವಾದ ಉಂಟು ಮಾಡುತಿದ್ದು, ಇದರಿಂದ ಭಾಷೆಯ ಮೇಲೂ ದಾಳಿಗಳು ಆಗುತ್ತಿವೆ. ಈ ನಿಟ್ಟಿನಲ್ಲಿ ಕನ್ನಡ ನಾಡು, ನುಡಿಯ ಬೆಳವಣಿಗೆಗೆ ಪ್ರತಿಯೋರ್ವ ಕನ್ನಡಿಗನು ಮುಂದಾಗಬೇಕು ಎಂದು ಕರೆ ನೀಡಿದರು.
ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಾಪು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಧಾಮಾ ಶೆಟ್ಟಿ, ಸಮಾಜ ಸೇವಕ ಲೀಲಾಧರ ಶೆಟ್ಟಿ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ, ಕಾಪು ಪ್ರಥಮ ದರ್ಜೆ ಕಾಲೇಜಿನ ಪ್ರೊ. ಸ್ಟೀವನ್ ಕ್ವಾಡ್ರಸ್, ನಿವೃತ್ತ ಪ್ರಾಂಶುಪಾಲ ಎಂ.ಎನ್. ಹೆಗ್ಡೆ ಉಪಸ್ಥಿತರಿದ್ದರು.
ಪೊಲೀಸ್ ಠಾಣೆಯಲ್ಲೂ ಮೊಳಗಿದ ಹಾಡು: ನನ್ನ ನಾಡು - ನನ್ನ ಹಾಡು ಸಮೂಹ ಗೀತೆ 'ಕೋಟಿ ಕಂಠ ಗಾಯನ' ಕಾರ್ಯಕ್ರಮವು ಪಡುಬಿದ್ರಿ ಠಾಣೆಯಲ್ಲೂ ನಡೆಯಿತು.
ಪೊಲೀಸ್ ಎಸ್‍ಐ ಪುರುಷೋತ್ತಮ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಯೋಗೀಶ್ ಹಾಗೂ ರೋಟರಿ ಕ್ಬಬ್‍ನ ಸುಧಾಕರ ಕೆ. ಪೊಲೀಸರು ಹಾಗೂ ರೋಟರಿ ಕ್ಲಬ್ ಸದಸ್ಯರು, ರೋಟರಿ ಸಮುದಾಯ ದಳದ ಸದಸ್ಯರು ಭಾಗವಹಿಸಿ ಕನ್ನಡ ನಾಡು ನುಡಿಯ ಗೀತೆಗಳನ್ನು ಹಾಡಿದರು.
ಕ್ರೈಂ ಎಸ್‍ಐ ಪ್ರಕಾಶ್, ಎಎಸ್‍ಐ ದಿವಾಕರ, ಸುರೇಶ್ ಭಟ್, ಸುದೇಶ್ ಶೆಟ್ಟಿ, ನರೇಶ್, ರೋಟರಿ ಕ್ಲಬ್ ಅಧ್ಯಕ್ಷೆ ಗೀತಾ ಅರುಣ್, ಕಾರ್ಯದರ್ಶಿ ಜ್ಯೋತಿ ಮೆನನ್, ಸಮುದಾಯ ದಳದ ಅಧ್ಯಕ್ಷೆ ದೀಪಾಶ್ರೀ, ಕಾರ್ಯದರ್ಶಿ ತನಿಷಾ ಜಿ. ಕುಕ್ಯಾನ್, ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು.