ಭಟ್ಕಳ : ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೋಟಿ ಕಂಠ ಗಾಯನ

ಭಟ್ಕಳ : ಪಟ್ಟಣದ ಜಟ್ಟಪ್ಪ ನಾಯ್ಕ ಬಸದಿಯಲ್ಲಿ ಶುಕ್ರವಾರ ಬೆಳಗ್ಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ನಾಡು ನುಡಿ, ನೆಲ, ಭಾಷೆ, ಸಂಸ್ಕೃತಿ ಹಿರಿಮೆ ಕುರಿತಾದ ಹಾಗೂ ಕನ್ನಡ ಶ್ರೇಷ್ಠತೆ ಸಾರುವ ಕೋಟಿ ಕಂಠ ಗಾಯನ ನಡೆಯಿತು.
ಉಪಸ್ಥಿತರಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರು, ನ್ಯೂ ಇಂಗ್ಲೀಷ್ ಸ್ಕೂಲ್, ವಿದ್ಯಾಭಾರತಿ ಶಾಲೆಯ ವಿದ್ಯಾರ್ಥಿಗಳು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಐದು ಜನಪ್ರಿಯ ಹಾಡನ್ನು ಹಾಡಿದರು. ಇದೇ ಸಂದರ್ಭದಲ್ಲಿ ಕನ್ನಡ ನಾಡು ರಕ್ಷಣೆ ಕುರಿತು ಪ್ರತಿಜ್ಞೆ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನೀಲ ನಾಯ್ಕ, ಕೋಟಿ ಕಂಠ ಗಾಯನ ಕನ್ನಡ ನಾಡಿನ ಕಲೆ, ಸಂಸ್ಕೃತಿ, ನೆಲ ಮತ್ತು ವೈವಿದ್ಯತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ಕರ್ನಾಟಕದಂತಹ ವೈವಿದ್ಯತೆಯುಳ್ಳ ಪ್ರದೇಶ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಪ್ರಸಿದ್ಧ ಗಾಯನದ ಮೂಲಕ ನಮ್ಮ ರಾಜ್ಯದ ನೆಲ, ಜಲ, ಕಲೆ, ಸಂಸ್ಕೃತಿಗೆ ಗೌರವ ಸಲ್ಲಿಸಲಾಗುತ್ತಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ರಾಜ್ಯದಲ್ಲಿ ಸುನೀಲಕುಮಾರ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ನಂತರ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಎಲ್ಲೆಲ್ಲೂ ನಾಡಿಗೆ ಗೌರವ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.
ಸಹಾಯಕ ಆಯುಕ್ತೆ ಮಮತಾದೇವಿ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ತಹಸೀಲ್ದಾರ ಸುಮಂತ, ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಎಂಕೆ ಸುರೇಶ, ನ್ಯೂ ಇಂಗ್ಲೀಷ್ ಶಾಲೆಯ ಮುಖ್ಯಶಿಕ್ಷಕ ಗಣಪತಿ ಶಿರೂರು, ವಿದ್ಯಾಭಾರತಿ ಶಾಲೆಯ ಮುಖ್ಯಶಿಕ್ಷಕಿ ರೂಪಾ ಖಾರ್ವಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮುಂತಾದವರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಸ್ವಾಗತಿಸಿದರು. ಶಿಕ್ಷಕ ಪಾಂಡುರಂಗ ಅಳ್ವೆಗದ್ದೆ ನಿರೂಪಿಸಿದರು.








