ನ.7ಕ್ಕೆ ದಿಗ್ವಿಜಯ ರಥಯಾತ್ರೆ ಉಡುಪಿಗೆ

ಉಡುಪಿ, ಅ.28: ಅ.5ರಂದು ಅಯೋಧ್ಯೆಯಿಂದ ಹೊರಟ ಶ್ರೀರಾಮಚಂದ್ರ ದೇವರ ದಿಗ್ವಿಜಯ ಯಾತ್ರೆಯು ನ.7ರಂದು ಉಡುಪಿಗೆ ಆಗಮಿಸಲಿದೆ ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಕೊಡವೂರು ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದಿಗ್ವಿಜಯ ಯಾತ್ರೆಯು 60 ದಿನಗಳಲ್ಲಿ 27 ರಾಜ್ಯ, 15,000 ಕಿ.ಮೀ. ದೂರವನ್ನು ಕ್ರಮಿಸಿ ಅಯೋಧ್ಯೆಗೆ ಮರಳಲಿದೆ. ಈ ರಥಯಾತ್ರೆಯನ್ನು ಉಡುಪಿ ಜಿಲ್ಲೆಯಲ್ಲಿ ಸ್ವಾಗತಿಸಲು ಉಡುಪಿಯ ಪ್ರಮುಖರನ್ನು ಸೇರಿಸಿಕೊಂಡು ಸ್ವಾಗತ ಸಮಿತಿಯನ್ನು ರಚಿಸಲಾಗಿದೆ ಎಂದರು.
ರಥವನ್ನು ನ.7ರಂದು ಬೆಳಗ್ಗೆ 10ಗಂಟೆಗೆ ಸಂತೆಕಟ್ಟೆ ಜಂಕ್ಷನ್‌ನಲ್ಲಿ ಸ್ವಾಗತಿಸ ಲಾಗುವುದು. ಈ ರಥ ನ.6ರಂದು ಕೊಲ್ಲೂರಿಗೆ ಆಗಮಿಸಲಿದೆ. ಅಲ್ಲಿಂದ ಬೆಳಗ್ಗೆ ಉಡುಪಿಗೆ ಬರಲಿದ್ದು, ಸಂತೆಕಟ್ಟೆಯಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು ಎಂದರು.
ಬಳಿಕ ಅಲ್ಲೇ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂತ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಶಕ್ತಿ ಶಾಂತಾನಂದ ಸ್ವಾಮೀಜಿ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಉಡುಪಿಯ ಣ್ಯರೂ ಈ ವೇಳೆ ಉಪಸ್ಥಿತರಿರುವರು ಎಂದು ವಿಜಯ ಕೊಡವೂರು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮದ ಬಳಿಕ ಅಯೋದ್ಯೆಯಿಂದ ದಿಗ್ವಿಜಯ ರಥಯಾತ್ರೆಯಲ್ಲಿ ಬರುವ ಶ್ರೀರಾಮನ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಲು ಅವಕಾಶವಿದೆ. 800 ಮನೆಯಿಂದ ಹಾಲಿನ ಅಭಿಷೇಕ ನಡೆಯಲಿದೆ. ನಂತರ ರಥಯಾತ್ರೆಯು ಸಂತೆಕಟ್ಟೆಯಿಂದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬೃಹತ್ ವಾಹನ ಜಾಥಾ ಮೂಲಕ ಸಾಗಲಿದೆ. ಜಾಥಾದಲ್ಲಿ ಕಾರು ಹಾಗೂ ಬೈಕ್‌ಗಳು ಇರಲಿವೆ ಎಂದರು.
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಾಡೋಜ ಜಿ.ಶಂಕರ್ ನೇತೃತ್ವದಲ್ಲಿ ಭಕ್ತಾದಿಗಳಿಗೆ ಅನ್ನಪ್ರಸಾದದ ವಿತರಣೆಯಾಗಲಿದೆ. ಶೋಭಾ ಯಾತ್ರೆಯಲ್ಲಿ ಒಂದು ಸಾವಿರ ಬೈಕ್ ಹಾಗೂ 500 ಕಾರುಗಳು ಪಾಲ್ಗೊಳ್ಳಲಿವೆ. ಬಳಿಕ ರಥಯಾತ್ರೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಗೆ ತೆರಳಲಿದೆ ಎಂದು ಕೊಡವೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿ, ಉಪಾಧ್ಯಕ್ಷ ಮನೋಹರ್ ಶೆಟ್ಟಿ ತೋನ್ಸೆ, ರಾಮ ಪೂಜಾರಿ ಸಂತೆಕಟ್ಟೆ, ಮಹಿಳಾ ಪ್ರಮುಖ್ ತಾರಾ ಉಮೇಶ್ ಆಚಾರ್ಯ, ಯಶೋಧ ಕೇಶವ್ ಉಪಸ್ಥಿತರಿದ್ದರು.







