ಸ್ಪರ್ಧೆಯಲ್ಲಿ ಭಾಗವಹಿಸಲು ವೆಯ್ಟ್ ಲಿಫ್ಟರ್‌ಗೆ ಆರ್ಥಿಕ ನೆರವಿಗೆ ಮನವಿ

ಉಡುಪಿ : ಉತ್ತರ ಪ್ರದೇಶದ ಮೋದಿನಗರದಲ್ಲಿ ನ.2ರವರೆಗೆ ನಡೆಯುವ 2022ರ ಖೇಲೊ ಇಂಡಿಯಾ ಮಹಿಳಾ ಲೀಗ್‌ನ ವೆಯ್ಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ತನಗೆ ಸರಕಾರ ಹಾಗೂ ಸಂಘಸಂಸ್ಥೆಗಳು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಬೇಕು ಎಂದು ಪ್ರತಿಭಾನ್ವಿತ ಯುವ ವೆಯ್ಟ್‌ಲಿಫ್ಟರ್ ಯಶಸ್ವಿನಿ ವಿ.ಭಂಡಾರಿ ಮನವಿ ಮಾಡಿದ್ದಾರೆ.
ಗುರುವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳ್ವಾಸ್ ಕಾಲೇಜಿನಲ್ಲಿ 3ನೇ ವರ್ಷದ ಪದವಿ ಶಿಕ್ಷಣ ಪಡೆಯುತ್ತಿರುವ ತಾನು ಇದೀಗ ಖೇಲೊ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದೇನೆ. ಕಾಪು ತಾಲೂಕಿನ ಪಡುಬಿದ್ರಿಯ ನಡ್ಸಾಲು ಗ್ರಾಮದ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದಿಂದ ಬಂದಿರುವ ತನಗೆ ಇದರಲ್ಲಿ ಭಾಗವಹಿಸಲು ಹಣಕಾಸಿನ ತೊಂದರೆ ಇದೆ. ಹೀಗಾಗಿ ದಾನಿಗಳು, ಸರಕಾರ ತನಗೆ ಧನಸಹಾಯ ಮಾಡಬೇಕು ಎಂದು ಕಳಕಳಿಯ ಮನವಿ ಮಾಡಿದರು.
ಈಗಾಗಲೇ ಹಲವು ಟೂರ್ನಿಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಜಯಿಸಿದ್ದೇನೆ. ಅದೇ ಆಧಾರದಲ್ಲಿ ಖೇಲೊ ಇಂಡಿಯಾದಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಆಳ್ವಾಸ್ ಕಾಲೇಜಿನಿಂದ ಈಗಾಗಲೇ ಹಲವು ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತಿದೆ. ದಾನಿಗಳಿಂದ, ಸಂಘ ಸಂಸ್ಥೆಯಿಂದ ನೆರವನ್ನು ತಾವು ನಿರೀಕ್ಷಿಸುವುದಾಗಿ ಅವರು ತಿಳಿಸಿದರು.
ಜಿಲ್ಲಾ ಸವಿತಾ ಸಮಾಜ ಸಂಘದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಮಾತನಾಡಿ, ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಾನಿಗಳು ಧನಸಹಾಯ ಮಾಡುವಂತೆ ಮನವಿ ಮಾಡಿದರು.
ಸಂಘದ ಪದಾಧಿಕಾರಿಗಳಾದ ಸದಾಶಿವ ಬಂಗೇರ, ವಿನಯ ಭಂಡಾರಿ, ರಾಜು ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







