ಮಗಳಿಗೆ ಕಚ್ಚಿದ ಏಡಿಯನ್ನು ಜೀವಂತ ತಿಂದ ವ್ಯಕ್ತಿ ಅಸ್ವಸ್ಥ

ಬೀಜಿಂಗ್, ಅ.28: ತನ್ನ ಮಗಳಿಗೆ ಕಚ್ಚಿದ ಏಡಿ(Bitten crab)ಗೆ ಸೇಡು ತೀರಿಸಿಕೊಳ್ಳಬೇಕು ಎಂದು ಅದನ್ನು ಜೀವಂತವಾಗಿ ಕಚ್ಚಿತಿಂದ ಚೀನಾದ ವ್ಯಕ್ತಿಯೊಬ್ಬ 2 ತಿಂಗಳ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪೂರ್ವ ಚೀನಾದ ಝೆಜಿಯಾಂಗ್(Zhejiang) ಪ್ರಾಂತದ 39 ವರ್ಷದ ಲು ಎಂಬಾತನ ಪುತ್ರಿಗೆ ಏಡಿಯೊಂದು ಕಚ್ಚಿದೆ. ಇದರಿಂದ ಕೆರಳಿದ ಲು ಆ ಏಡಿಯನ್ನು ಜೀವಂತ ಜಗಿದು ತಿಂದುಬಿಟ್ಟಿದ್ದಾನೆ. 2 ತಿಂಗಳ ಬಳಿಕ ಆತನಿಗೆ ತೀವ್ರ ಬೆನ್ನುನೋವು ಕಾಡಿದ್ದು ವೈದ್ಯರಲ್ಲಿ ತೆರಳಿದ್ದಾನೆ. ವೈದ್ಯರ ತಪಾಸಣೆಯಲ್ಲಿ ಆತನ ಎದೆ, ಹೊಟ್ಟೆ, ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬಂದಿದ್ದು ಆತನನ್ನು ವಿಚಾರಿಸಿದಾಗ 2 ತಿಂಗಳ ಹಿಂದೆ ಜೀವಂತ ಏಡಿಯನ್ನು ತಿಂದಿರುವ ಮಾಹಿತಿ ನೀಡಿದ್ದಾನೆ. ಆತನಿಗೆ ಅಲರ್ಜಿ ಸಮಸ್ಯೆಯಿಂದ ತೊಂದರೆ ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದಾನೆ ಎಂದು ವೈದ್ಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Next Story