ಬಾಲಾರೋಪಿ ವಯಸ್ಕನೆಂದು ಪರಿಗಣಿಸಲ್ಪಟ್ಟರೂ ಬಾಲ ನ್ಯಾಯ ಕಾಯ್ದೆಯ ಸೌಲಭ್ಯಗಳು ಅನ್ವಯ: ಹೈಕೋರ್ಟ್

ಮುಂಬೈ, ಅ. 28: ಬಾಲಾರೋಪಿಯನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆಗೆ ಒಳಪಡಿಸಿದರೂ ಆತ/ಆಕೆಗೆ ಬಾಲ ನ್ಯಾಯ ಕಾಯ್ದೆ ಅಡಿ ಸೌಲಭ್ಯಗಳನ್ನು ನಿರಾಕರಿಸಬಾರದು ಎಂದು ಬಾಂಬೆ ಉಚ್ಚ ನ್ಯಾಯಾಲಯ ಅಭಿಪ್ರಾಯಿಸಿದೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೋರಿವಿಲ್ಲಿ ಪೊಲೀಸರಿಂದ 2020ರಲ್ಲಿ ಬಂಧಿತನಾಗಿರುವ ಬಾಲಕನಿಗೆ ನ್ಯಾಯಮೂರ್ತಿ ಭಾರತಿ ಡಾಂಗ್ರೆ ನೇತೃತ್ವದ ಏಕ ಸದಸ್ಯ ಪೀಠ ಅಕ್ಟೋಬರ್ 21ರಂದು ಜಾಮೀನು ಮಂಜೂರು ಮಾಡಿದ ಸಂದರ್ಭ ಈ ಅಭಿಪ್ರಾಯ ವ್ಯಕ್ತಪಡಿಸಿತು. ಅಪರಾಧ ನಡೆಯುವ ಸಂದರ್ಭ ಆರೋಪಿ 17 ವರ್ಷದ ಬಾಲಕನಾಗಿದ್ದ.
ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಯಾವುದೇ ಮಗುವನ್ನು ಕ್ರಿಮಿನಲ್ ಕಾರ್ಯ ವಿಧಾನದ ಸಂಹಿತೆಯ ಯಾವುದೇ ನಿಬಂಧನೆಗಳ ಹೊರತಾಗಿಯೂ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಹಾಗೂ ಅವರನ್ನು ನಿಗಾ ಅಧಿಕಾರಿ ಅಥವಾ ಕುಟುಂಬದ ಯಾವುದೇ ಸದಸ್ಯರ ನಿಗಾದಲ್ಲಿ ಇರಿಸಬೇಕು ಎಂಬ ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ಆರೋಪಿ ಜಾಮೀನು ಅರ್ಜಿ ಸಲ್ಲಿಸಿದ್ದ.
ಪ್ರಕರಣದಲಿ ಬಾಲಾರೋಪಿಯನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಬಾಲ ನ್ಯಾಯ ಮಂಡಳಿ ನಿರ್ದೇಶಿಸಿದ ಆಧಾರದಲ್ಲಿ ವಿಶೇಷ ಮಕ್ಕಳ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಅನಂತರ ಆರೋಪಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ ಹಾಗೂ ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸುವುದರಿಂದ ಬಾಲ ನ್ಯಾಯ ಕಾಯ್ದೆಯ ನಿಯಮಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ಆದರೆ ಉಚ್ಚ ನ್ಯಾಯಾಲಯ ಇದನ್ನು ಒಪ್ಪಿಕೊಳ್ಳಲು ನಿರಕಾರಿಸಿತು ಹಾಗೂ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆಗೆ ಒಳಪಡಿಸಲು ಆದೇಶಿಸಿದ್ದರೂ ಆತ ಇನ್ನೂ ಬಾಲಾರೋಪಿಯಾಗಿದ್ದಾನೆ ಎಂದು ಹೇಳಿತು. ಬಾಲಾರೋಪಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸುವಂತೆ ನಿರ್ದೇಶಿಸಲಾಗಿದೆ ಎಂಬ ಕಾರಣಕ್ಕಾಗಿ ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 12ರ ಸೌಲಭ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಡಾಂಗ್ರೆ ಹೇಳಿದರು.







