ದಲಿತರ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಹೋರಾಟದ ಬಗೆಗಿನ ನಾಲ್ಕು ಕೃತಿಗಳು

ಸುದೀರ್ಘ 35 ವರ್ಷಗಳ ಕಾಲ ಕರ್ನಾಟಕ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿರುವ (ನಿವೃತ್ತ ಐಎಎಸ್ ಅಧಿಕಾರಿ) ಎನ್.ಸಿ.ಮುನಿಯಪ್ಪತಮ್ಮ ಅಪಾರ ಅನುಭವ ಮತ್ತು ದಕ್ಷ ಆಡಳಿತದ ಹಿನ್ನೆಲೆಯ ಆಧಾರದಿಂದ ‘ಪೇಬ್ಯಾಕ್ ಟು ಸೊಸೈಟಿ’ ಎಂಬಂತೆ ತಮ್ಮ ಆಲೋಚನೆಗಳನ್ನು ಕೆಳಗಿನ ನಾಲ್ಕು ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮ, ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ನಿವೃತ್ತಿಯಾದ ನಂತರ ರಾಜ್ಯಪಾಲರ ನೇಮಕದ ಮೇರೆಗೆ 5 ವರ್ಷ ಕಾಲ ಚುನಾವಣಾ ಆಯುಕ್ತರಾಗಿ ಕೆಲಸ ಮಾಡಿದರು.
ಕೋಲಾರ ನಚಿಕೇತ ನಿಲಯದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯಾಗಿ ಉಳಿದುಕೊಂಡಿದ್ದರ ಪರಿಣಾಮದಿಂದಲೋ ಏನೋ, ಇವರು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಪ.ಜಾತಿ/ಪ.ಪಂಗಡಗಳ 380 ವಿದ್ಯಾರ್ಥಿ ನಿಲಯಗಳು ನಿರ್ಮಾಣಗೊಂಡವು. ಬಾಂಗ್ಲಾದೇಶದ ನೊಬಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಯೂನುಸ್ ಅವರ ಸ್ಫೂರ್ತಿಯಿಂದ ಮುನಿಯಪ್ಪನವರು 2000ರಲ್ಲಿ ಕರ್ನಾಟಕದಲ್ಲಿ ‘ಸ್ತ್ರೀಶಕ್ತಿ ಯೋಜನೆ’ಯನ್ನು ಪ್ರಾರಂಭಿಸಿದರು. ಇದರಿಂದ ಇಂದು ಕರ್ನಾಟಕದಲ್ಲಿ ಸುಮಾರು 3.30 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ಹರಡಿಕೊಂಡಿವೆ. ಈ ಎಲ್ಲದರ ಅಪಾರ ಅನುಭವ ಮತ್ತು ಆಡಳಿತದಿಂದ ಕೆಳಗಿನ ಕೃತಿಗಳ ರಚನೆಯಾಗಿವೆ. ಸಾಮಾಜಿಕ ಕಳಕಳಿ, ಮನುಷ್ಯಪ್ರೀತಿ ಇರುವ ಯಾರೇ ಆಗಲಿ ಈ ಕೃತಿಗಳನ್ನು ಓದಿದರೆ ಧಿಙ್ಮೂಡರಾಗುವುದರಲ್ಲಿ ಸಂದೇಹವಿಲ್ಲ. ಕೃತಿಗಳ ವಿವರ:
1.ಆರ್ಥಿಕ ಸಮಾನತೆಗೆ ವಿಶೇಷ ಘಟಕ ಯೋಜನೆ - ಮಂತ್ರದಂಡವೇ?
ಪುಟ 104, ಬೆಲೆ 100, ಸಿದ್ಧಾರ್ಥ ಫೌಂಡೇಷನ್, ಬೆಂಗಳೂರು.
2.ಪರಿಶಿಷ್ಟರ ಆರ್ಥಿಕ ಸಬಲೀಕರಣ - ಮನ್ವಂತರಗಳು
ಪುಟ-96, ಬೆಲೆ 70, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ, ಬೆಂಗಳೂರು.
3.ಭಾರತ ಸಂವಿಧಾನ: ದುರ್ಬಲ ವರ್ಗಗಳ ಪರಿವರ್ತನೆಯ - ಪುನರಾವಲೋಕನ
ಪುಟ 204, ಬೆಲೆ 180, ಸಿದ್ಧಾರ್ಥ ಫೌಂಡೇಷನ್, ಬೆಂಗಳೂರು.
4.ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಋಣ ಸಂದಾಯ - ಚಿಂತನೆಗಳು
ಪುಟ 140, ಬೆಲೆ 90, ಸಿದ್ಧಾರ್ಥ ಫೌಂಡೇಷನ್, ಬೆಂಗಳೂರು.
ವಿವಿಧ ಕ್ಷೇತ್ರಗಳಲ್ಲಿ ಸುದೀರ್ಘ ಆಡಳಿತ ಅನುಭವಗಳನ್ನು ಹೊಂದಿರುವ, ವಿಶೇಷವಾಗಿ ಶೋಷಿತ ವರ್ಗಗಳ ಕಲ್ಯಾಣಗಳಿಗೆ ಬೌದ್ಧಿಕ ಸ್ವರೂಪವನ್ನು ನೀಡಿ ಅನುಷ್ಠಾನಗೊಳಿಸಿದ ಅಧಿಕಾರಿಗಳಲ್ಲಿ ಇವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ರಾಜ್ಯದ ಹಲವಾರು ಉನ್ನತ ಹುದ್ದೆಗಳಲ್ಲಿ ಗಳಿಸಿದ ಅನುಭವ, ದಕ್ಷತೆ ಮತ್ತು ಪ್ರೌಢಿಮೆಗಳನ್ನು ಈ ನಾಲ್ಕೂ ಕೃತಿಗಳಲ್ಲಿ ನೋಡಬಹುದಾಗಿದೆ. ಇವರ ಅಧಿಕಾರಾವಧಿಯಲ್ಲಿ ಆಡಳಿತಾತ್ಮಕ ಕಾನೂನುಗಳು ಮತ್ತು ಯೋಜನೆಗಳು ಜನಕಲ್ಯಾಣದಲ್ಲಿ ಎಷ್ಟೊಂದು ಫಲಕಾರಿಯಾಗಿವೆ ಎಂಬುದನ್ನು ಅವರು ತಮ್ಮ ಸಂಶೋಧನಾತ್ಮಕ ದೃಷ್ಟಿಕೋನಗಳಡಿ ವಿಮರ್ಶೆ ಮತ್ತು ವಿಶ್ಲೇಷಣಕ್ಕೆ ಒಳಪಡಿಸಿರುವುದು ಈ ಕೃತಿಗಳಲ್ಲಿ ಎದ್ದು ಕಾಣಿಸುತ್ತದೆ. ಒಬ್ಬ ದಲಿತ ಅಧಿಕಾರಿ ದೊಡ್ಡ ಹುದ್ದೆಯನ್ನು ಅಲಂಕರಿಸಿ ಆಡಳಿತವನ್ನು ನಿರ್ವಹಿಸುವಾಗ ತಾನು ಬಂದ ಸಮುದಾಯಕ್ಕೆ ಋಣ ಸಂದಾಯ ಮಾಡುವುದು ಒಂದು ಸಾಮಾಜಿಕ ಹೊಣೆಯಾಗಿರುತ್ತದೆ. ಅಂಬೇಡ್ಕರ್ ಇದನ್ನೇ ಪದೇಪದೇ ಹೇಳುತ್ತಿದ್ದರು. ಮುನಿಯಪ್ಪನವರ ಸುದೀರ್ಘ ಅನುಭವ, ನಿರಂತರ ಓದು, ಜ್ಞಾನದ ದಾಹದಿಂದ ಇಂತಹ ಕೃತಿಗಳನ್ನು ರಚಿಸಲು ಸಾಧ್ಯವಾಗಿದೆ. ನಿವೃತ್ತಿಯಾದ ಬಹಳಷ್ಟು ಅಧಿಕಾರಿಗಳು ರಿಯಲ್ ಎಸ್ಟೇಟ್ ಅಥವಾ ರಾಜಕಾರಣದಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ. ಆದರೆ ಮುನಿಯಪ್ಪನವರು ತಮ್ಮ ಕೋಣೆತುಂಬಾ ಪುಸ್ತಕಗಳನ್ನು ಹರಡಿಕೊಂಡು ಕುಳಿತಿರುತ್ತಾರೆ. ಅವರು ಬರೆದಿರುವ ನಾಲ್ಕೂ ಕೃತಿಗಳನ್ನು ಓದಿ ಮುಗಿಸಿದಾಗ ದಲಿತರ ಆರ್ಥಿಕ ಸಮಾನತೆ ಮತ್ತು ಆರ್ಥಿಕ ಸಬಲೀಕರಣದ ಬಗ್ಗೆ ಹಲವಾರು ವಿಷಯಗಳನ್ನು ಇಲ್ಲಿ ನೋಡಬಹುದಾಗಿದೆ. ಪ.ಜಾತಿ ಮತ್ತು ಪ.ಪ.ಗಳ ಒಟ್ಟು ಜನಸಂಖ್ಯೆಗೆ ಅನುಗುಣವಾಗಿ ಯಾವುದೇ ಯೋಜನೆಗಳನ್ನು ನಿರ್ವಹಿಸುತ್ತಿಲ್ಲ ಅಥವಾ ಅವುಗಳಿಗೆ ಸೂಚಿಸುವ ಹಣವನ್ನು ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ ಎನ್ನುವುದನ್ನು ಇಲ್ಲಿ ಅಂಕಿ ಅಂಶಗಳ ಸಮೇತ 2020-23ನೇ ವರ್ಷದವರೆಗೂ ದಾಖಲಿಸಿದ್ದಾರೆ. ಒಂದು ರೀತಿಯಲ್ಲಿ ಇದು ಡೇಟಾಬ್ಯಾಂಕ್‌ನಂತಿವೆ.
ಈ ಪುಸ್ತಕಗಳು ಒಮ್ಮೆ ಓದಿ ಪಕ್ಕಕ್ಕಿಡುವಂತವಲ್ಲ. ಬಹಳಷ್ಟು ಚಿಂತನೆಗೆ ಒಳಪಡಿಸುವ ಮತ್ತು ಮುನಿಯಪ್ಪನಂತವರು ಮಾತ್ರ ಬರೆಯಬಹುದಾದ ಸಾಮಾಜಿಕ ಮತ್ತು ವಿಶೇಷವಾಗಿ ಆರ್ಥಿಕ ಚಿಂತನೆಗಳನ್ನು ಒಳಗೊಂಡಿವೆ. ಸೃಜನಶೀಲ ದಲಿತ ಸಾಹಿತಿಗಳಾಗಲಿ, ದಲಿತ ನಾಯಕರಾಗಲಿ, ದಲಿತ ಸಂಶೋಧಕರಾಗಲಿ ಯಾರೂ ಇದುವರೆಗೂ ಮುನಿಯಪ್ಪನವರು ಎತ್ತಿರುವ ಪ್ರಶ್ನೆಗಳನ್ನು ಇಷ್ಟು ತೀವ್ರವಾಗಿ ಅಂಕಿಅಂಶಗಳ ಸಮೇತ ಪ್ರಶ್ನಿಸಿಲ್ಲ ಎಂದೇ ಹೇಳಬಹುದು. ದಲಿತ ಚಿಂತಕರು, ಲೇಖಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಓದುವ ಅಗತ್ಯವಿದೆ. ಕಾರಣ, ದಲಿತರ ಆರ್ಥಿಕತೆಯ ಚಿಂತನೆಗಳ ಬಗ್ಗೆ ಇದುವರೆಗೂ ಯಾರೂ ಬರೆದಿಲ್ಲ ಎಂದೇ ಹೇಳಬೇಕು. ಇವರು ನಡೆಸಿರುವ ಅಧ್ಯಯನ ಪ.ಜಾತಿ ಮತ್ತು ಪ.ಪ.ಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳೇನು ಅದರಲ್ಲೂ ಆರ್ಥಿಕ ಮೇಲ್ಚಲನೆಯಲ್ಲಿ ಅವರ ಸ್ಥಾನಮಾನವೇನು ಎನ್ನುವುದನ್ನು ಗಮನಿಸಿದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಅವರ ಆರ್ಥಿಕ ಸ್ಥಿತಿಯಲ್ಲಿ ಏನೂ ಬದಲಾವಣೆಗಳಾಗಿಲ್ಲ ಎಂದೇ ಹೇಳಬೇಕಾಗುತ್ತದೆ. ಯಾವುದೇ ಪಕ್ಷದ ಸರಕಾರ, ರಾಜಕಾರಣಿಗಳು, ಅಧಿಕಾರಿಗಳು, ಮೇಲ್ಜಾತಿಗಳ ಸಾಮಾಜಿಕ ದಬ್ಬಾಳಿಕೆಗಳು, ದಲಿತ ಸಂಘ-ಸಂಸ್ಥೆಗಳು ಮತ್ತು ಹಾಸ್ಟೆಲ್‌ಗಳಲ್ಲಿ ನಡೆಯುವ ಎಲ್ಲಾ ರೀತಿಯ ಅವ್ಯವಹಾರಗಳನ್ನು ಅವರು ಸಾರಾಸಗಟಾಗಿ ತಮ್ಮ ಕೃತಿಗಳಲ್ಲಿ ಟೀಕಿಸುತ್ತಾರೆ.







