ಬೈಂದೂರು: 94ಸಿಸಿ ಅರ್ಜಿದಾರರ ಸಮಾವೇಶ

ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೈಂದೂರು ಗ್ರಾಮದ ಸರಕಾರಿ, ಸ್ಥಳದಲ್ಲಿ ವಾಸವಾಗಿ ಮನೆ, ಕೃಷಿ ಅಭಿವೃದ್ಧಿ ಪಡಿಸಿ ಸ್ಥಳ ಸ್ವಾಧೀನತೆ ಹೊಂದಿರುವ ಬಡ ರೈತ, ಕೂಲಿ ಕಾರ್ಮಿಕರು 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ಕೋರಿಕೆಗೆ ಸಲ್ಲಿಸಿದ ಅರ್ಜಿದಾರರ ಸಮಾವೇಶವು ಬೈಂದೂರು ಸಿಐಟಿಯು ಕಚೇರಿಯಲ್ಲಿ ಜರಗಿತು.
ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ನಾಗರತ್ನ ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಮೊದಲು ೯೪ಸಿ ಅಡಿ ಅರ್ಜಿ ಸಲ್ಲಿಸಿದವರಿಗೂ ಹಕ್ಕುಪತ್ರ ಕೊಡುವುದಕ್ಕೆ ಕಂದಾಯ ಇಲಾಖೆ ವತಿಯಿಂದ ಕ್ರಮ ವಹಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿದರು. ಉಪ್ಪುಂದ ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡ ಹೂವಯ್ಯ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷರಾಗಿ ನಾರಾಯಣ ಮರಾಠಿ ತೂಗ್ತಿ, ಉಪಾಧ್ಯಕ್ಷರಾಗಿ ಲಕ್ಷ್ಮಿ ಮಂಜು, ಭೋವಿ ತೊಂಡೆಮಕ್ಕಿ, ಪದ್ಮರಾಮ ಭೋವಿ ತೊಂಡೆಮಕ್ಕಿ, ನಾಗವೇಣಿ, ಕಾರ್ಯದರ್ಶಿಯಾಗಿ ಮಂಜು ನಾಥ ಪೂಜಾರಿ ವಿದ್ಯಾನಗರ, ಜೊತೆ ಕಾರ್ಯದರ್ಶಿಯಾಗಿ ನಾಗಮ್ಮ ರಾಜು ಭೋವಿ, ಸದಸ್ಯರಾಗಿ ಚಂದ್ರ ಮರಾಠಿ ತೂಗ್ತಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಿಐಟಿಯು ಬೈಂದೂರು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಉಪಸ್ಥಿತರಿದ್ದರು.







