ಪುನಿತ್‍ಗೆ ‘ಕರ್ನಾಟಕ ರತ್ನ ಪ್ರಶಸ್ತಿ'; ಪ್ರದಾನ ಸಮಾರಂಭಕ್ಕೆ ನಟ ರಜನೀಕಾಂತ್, ಜೂ.ಎನ್‍ಟಿಆರ್ ಆಗಮನ: ಸಚಿವ ಆರ್.ಅಶೋಕ್

ಬೆಂಗಳೂರು, ಅ. 29: ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ಕ್ಕೆ ನಟ ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ‘ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಜೂನಿಯರ್ ಎನ್‍ಟಿಆರ್ ಭಾಗವಹಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಟ ಪುನೀತ್ ಅವರು ಕರ್ನಾಟಕ ಕಂಡಂತಹ ಅಪರೂಪದ ಕಲಾವಿದ. ರಾಜಕುಮಾರ್‍ಗಿಂತಲೂಹೆಚ್ಚುಪ್ರಖ್ಯಾತಿ ಗಳಿಸಿದವರು. ಅವರುನಮ್ಮೆಲ್ಲರನ್ನು ಅಗಲಿ ಒಂದುವರ್ಷವಾಗಿದ್ದು,ಎಲ್ಲೆಡೆ ಅವರ ಸ್ಮರಣೆ ಮಾಡಲಾಗುತ್ತಿದೆ. ಹೀಗಾಗಿ ಅವರಿಗೆ ಗೌರವಿಸಲು ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ವಿಧಾನಸೌಧದ ವೈಭವಪೇತ ಮೆಟ್ಟಿಲುಗಳ ಮೇಲೆ ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು, ಸುಮಾರು 5 ಸಾವಿರ ಜನರಿಗೆ ಪಾಸ್ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮ ನೆನಪಿನಲ್ಲಿ ಉಳಿಯಬೇಕು. ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಜನಿಕಾಂತ್ ಆಗಮಿಸುತ್ತಿದ್ದಾರೆ. ಇದೇ ವೇಳೆ ಜೂನಿಯರ್ ಎನ್‍ಟಿಆರ್ ಅವರೂ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಟ ಪುನಿತ್‍ಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿಯು 50 ಗ್ರಾಂ ಚಿನ್ನದ ಪದಕ ಹೊಂದಿರಲಿದೆ. ಇದುವರೆಗೂ 8 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಹಿತ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ಅವರು ವಿವರ ನೀಡಿದರು.
ಹೆಚ್ಚಿನ ಪರಿಹಾರ: ‘ಕೃಷ್ಣಾ ಮೇಲ್ದಂಡೆ ಯೋಜನೆಯ 3ನೆ ಹಂತದ ರೈತರ ಜಮೀನಿಗೆ ಹೆಚ್ಚಿನ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಮಾರ್ಗಸೂಚಿ ಬೆಲೆ ನಿಗದಿ ವಿಚಾರವಾಗಿ ಸಂಪುಟ ಉಪ ಸಮಿತಿ ಸಭೆ ನಡೆಸಿದ್ದು, 26 ಸಾವಿರ ಎಕರೆ ಭೂ ಸ್ವಾಧೀನಕ್ಕೆ ಪರಿಹಾರ ನೀಡಲಾಗಿದೆ. ಇನ್ನೂ 50 ಸಾವಿರ ಎಕರೆಗೆ ಪರಿಹಾರ ನೀಡಬೇಕಿದೆ. ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ. ರೈತರು ಹೆಚ್ಚಿನ ಪರಿಹಾರಕ್ಕೆ ಆಗ್ರಹ ಮಾಡಿದ್ದಾರೆ. ಪರಿಶೀಲಿಸಿ ಹೆಚ್ಚಿನ ಮೊತ್ತದ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಅಶೋಕ್ ತಿಳಿಸಿದರು.
‘ಚಾಮರಾಜಪೇಟೆ ಆಟದ ಮೈದಾನದಲ್ಲಿ ಕನ್ನಡ ಬಾವುಟ ಹಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯದ ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಈ ವಿಚಾರದ ಬಗ್ಗೆ ತಡೆಯಾಜ್ಞೆ ಇರುವ ಹಿನ್ನೆಲೆಯಲ್ಲಿ ಆ ಮೈದಾನದಲ್ಲಿ ರಾಷ್ಟ್ರಧ್ವಜವನ್ನು ಬಿಟ್ಟು ಬೇರೆ ಧ್ವಜ ಹಾರಾಟ ಮಾಡುವಂತಿಲ್ಲ. ಹೀಗಾಗಿ ಎಜಿ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಮಾಡಲಾಗುವುದು'
-ಆರ್.ಅಶೋಕ್ ಕಂದಾಯ ಸಚಿವ







