ಕಾಣಿಯೂರು ಪ್ರಕರಣ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾವ: ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್

ಮಂಗಳೂರು: ಕಡಬ ತಾಲೂಕಿನ ಕಾಣಿಯೂರು ಗ್ರಾಮದಲ್ಲಿ ಇಬ್ಬರು ಮುಸ್ಲಿಂ ವರ್ತಕರ ಮೇಲೆ ಅಮಾನುಷ ವಾಗಿ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾವ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾವಂತರ, ಬುದ್ಧಿವಂತರ ಜಿಲ್ಲೆಯಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಇಂತಹ ಕೃತ್ಯ ನಡೆಯಬಾರದಿತ್ತು. ಚುನಾವಣೆ ಸಮೀಪಿಸುವಾಗ ಇಂತಹ ಘಟನೆಗಳಾಗುತ್ತಿರುವುದನ್ನು ಪೊಲೀಸ್ ಇಲಾಖೆ ಗಮನಿಸಬೇಕು. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಘಟನೆಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಜಿಲ್ಲೆಯಲ್ಲಿ ಶಾಂತಿ ಮರುಕಳಿಸಲು ಸಹಕರಿಸಬೇಕೆಂದು ಮನವಿ ಮಾಡಿರುವೆ. ಹಲ್ಲೆಗೊಳಗಾದ ವರ್ತಕರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಪಕ್ಷದ ಮುಖಂಡರ ಜೊತೆ ಚರ್ಚಿಸಲಾಗುವುದು ಎಂದು ಅಬ್ದುಲ್ ಜಬ್ಬಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಜೆ.ಆರ್.ಲೋಬೊ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಪಕ್ಷದ ಮುಖಂಡರಾದ ಸಿರಾಜ್ ದಾವಣಗೆರೆ, ಶಬ್ಬೀರ್ ಸಿದ್ದಕಟ್ಟೆ, ಹಬೀಬುಲ್ಲಾ ಕಣ್ಣೂರು, ಹಾರಿಸ್ ಬೈಕಂಪಾಡಿ, ಶಾಹುಲ್ ಹಮೀದ್ ಕದಿಕೆ, ಮುಹಮ್ಮದ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.