ಸುರತ್ಕಲ್ ಸರ್ಕಲ್‌ಗೆ ಸಾವರ್ಕರ್ ನಾಮಕರಣ ವಿಚಾರ: ಮನಪಾ ಸಾಮಾನ್ಯ ಸಭೆಯಲ್ಲಿ ಆಡಳಿತ- ವಿಪಕ್ಷದಿಂದ ಗದ್ದಲ
ಮಂಗಳೂರು: ನಗರದ ಸಮಸ್ಯೆ, ಅಭಿವೃದ್ಧಿ ಕಾರ್ಯಗಳ ಕುರಿತಂತೆ ಚರ್ಚೆಯಾಗಬೇಕಾದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ನಾಮಕರಣ ವಿಚಾರದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲಕ್ಕೆ ಸಾಕ್ಷಿಯಾಯಿತು.
ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ನಾಮಕರಣದ ಪ್ರಸ್ತಾಪದ ಕುರಿತಂತೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಧಿಕ್ಕಾರ- ಜೈಕಾರಕ್ಕೆ ಕಾರಣವಾಯಿತು.
ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಸುರತ್ಕಲ್ ಜಂಕ್ಷನ್‌ಗೆ ಸಾವರ್ಕರ್ ಹೆಸರಿಡುವ ಕಾರ್ಯಸೂಚಿ ಕಳೆದ ಸಭೆಯಲ್ಲಿ ಚರ್ಚೆಗೆ ಬಾರದೆ ಅಂಗೀಕಾರಗೊಂಡಿದೆ. ಸಾವರ್ಕರ್ ಹೆಸರಿಡುವ ಕುರಿತು ವಿಪಕ್ಷದ ವಿರೋಧವಿದ್ದು, ತಮ್ಮ ಆಕ್ಷೇಪ ದಾಖಲಿಸಬೇಕು ಎಂದು ವಿಪಕ್ಷ ನಾಯಕ ನವೀನ್ ಡಿಸೋಜ ಒತ್ತಾಯಿಸಿದರು.
ವಿಪಕ್ಷ ಸದಸ್ಯರಾದ ಅಬ್ದುಲ್ ರವೂಫ್, ಶಶಿಧರ ಹೆಗ್ಡೆ ಮತ್ತಿತರರು ಆಕ್ಷೇಪ ದಾಖಲಿಸುವಂತೆ ಪಟ್ಟು ಹಿಡಿದರು. ಆದರೆ ಮೇಯರ್ ಆಕ್ಷೇಪ ದಾಖಲಿಸಲು ಮನಸ್ಸು ಮಾಡಲಿಲ್ಲ. ಇದರಿಂದ ಅಸಮಾಧಾನಗೊಂಡ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪಾಲಿಕೆ ಆಡಳಿತಕ್ಕೆ ಧಿಕ್ಕಾರ ಕೂಗುತ್ತಾ ಪ್ರತಿಭಟಿಸಿದರು.
ಈ ಸಂದರ್ಭ ಮಾತನಾಡಿದ ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಕಳೆದ ಸಭೆಯಲ್ಲಿಯೇ ಕಾರ್ಯ ಸೂಚಿಯ ಮಂಡನೆಯಾಗಿದೆ. ಆಗ ಪ್ರಶ್ನಿಸದವರು ಈಗ ಸ್ಥಿರೀಕರಿಸುವ ವೇಳೆ ಆಕ್ಷೇಪ ವ್ಯಕ್ತಪಡಿಸುವುದು ಸಮಂಜಸವಲ್ಲ ಎಂದರು.
ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ಹೋರಾಟಗಾರರಾದ ಸಾವರ್ಕರ್ ಹೆಸರನ್ನು ಸುರತ್ಕಲ್ ಜಂಕ್ಷನ್‌ಗೆ ಇಡುವುದರಲ್ಲಿ ಏನು ತಪ್ಪಿದೆ? ಇಂದಿರಾ ಗಾಂಧಿ ಸರಕಾರವಿದ್ದಾಗಲೂ ಸಾವರ್ಕರ್ ಅವರ ಕುರಿತ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು. ಸಾವರ್ಕರ್ ಹೆಸರಿಡದಂತೆ ಆಕ್ಷೇಪ ದಾಖಲು ಮಾಡಲು ಒತ್ತಾಯಿಸುವ ವಿಪಕ್ಷ ಸದಸ್ಯರ ನಡೆ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ ಎಂದರು.
ಯಾರೇ ವಿರೋಧ ಮಾಡಿದರೂ ಸಾವರ್ಕರ್ ಹೆಸರನ್ನು ಇಟ್ಟೇ ಇಡುತ್ತೇವೆ. ಎನುತ್ತಾ ಸಾವರ್ಕರ್ ಗೆ ಜೈ ಎಂದು ಸುಧೀರ್ ಶೆಟ್ಟಿ ಘೋಷಣೆ ಕೂಗಲಾರಂಭಿಸಿದರು. ಆಡಳಿತ ಪಕ್ಷದ ಇತರೆ ಸದಸ್ಯರು ಕೂಡ ಜಯಕಾರಕ್ಕೆ ಸಾಥ್ ನೀಡಿದರು. ಕೆರಳಿದ ವಿಪಕ್ಷ ಕಾಂಗ್ರೆಸ್ ಸದಸ್ಯರು ಕೂಡ ಪಾಲಿಕೆ ಆಡಳಿತಕ್ಕೆ ಧಿಕ್ಕಾರ ಕೂಗಿದರು. ಸದಸ್ಯರ ಮಾತಿನ ಚಕಮಕಿಯಿಂದಾಗಿ ಪಾಲಿಕೆ ಸಾಮಾನ್ಯ ಸಭೆ ಗೊಂದಲದ ಗೂಡಾಗಿ ಪರಿಣಮಿಸಿದ ಪರಿಣಾಮ ಮೇಯರ್ ಅವರು ಸಭೆಯನ್ನು ಕೆಲಕಾಲ ಮುಂದೂಡಿದರು.
ಬಳಿಕ ಸಭೆ ಆರಂಭಿಸಿದ ಮೇಯರ್ ಅವರು ವಿಪಕ್ಷ ಸದಸ್ಯರ ಆಕ್ಷೇಪ ದಾಖಲಿಸಲು ನಿರ್ಣಯ ಕೈಗೊಂಡರು. ಆದರೆ ವಿಪಕ್ಷ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಪ್ರತಿ ಬಾರಿ ಪಾಲಿಕೆ ಸದಸ್ಯರಿಗೆ ನೀಡುವ ಅಜೆಂಡಾ ಒಂದಾದರೆ, ಸಭೆಯಲ್ಲಿ ಪಾಲ್ಗೊಂಡ ಬಳಿಕ ಎಡಿಷನಲ್ ಅಜೆಂಡಾ ನೀಡಲಾಗುತ್ತದೆ. ಈ ಬಾರಿಯೂ ಹಾಗೆಯೇ ಆಗಿದೆ. ಎಡಿಷನಲ್ ಅಜೆಂಡಾ ಯಾಕೆ ಮೊದಲೇ ನೀಡುವುದಿಲ್ಲ. ಇದರಲ್ಲಿನ ಕೆಲವು ಅಂಶಗಳನ್ನು ತಿಳಿಯಲು ನಮಗೆ ಕಾಲಾವಕಾಶ ಬೇಕು. ಆದ್ದರಿಂದ ಸಭೆ ಮುಂದೂಡಬೇಕು ಎಂದು ನವೀನ್ ಡಿಸೋಜ ಸೇರಿದಂತೆ ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದರು.
ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯ ನಡುವೆಯೇ ಕಾರ್ಯಸೂಚಿ ಮಂಡಿಸಲು ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿಯವರಿಗೆ ಸೂಚನೆ ನೀಡಿದರು. ಮುಖ್ಯ ಸಚೇತಕರು ಕಾರ್ಯ ಸೂಚಿ ಮಂಡಿಸುವುದರೊಂದಿಗೆ ಸಭೆ ಕೊನೆಗೊಂಡಿತು.
ಉಪಮೇಯರ್ ಪೂರ್ಣಿಮಾ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.