ರಸ್ತೆ ಅಪಘಾತ: ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ದೈಹಿಕ ಶಿಕ್ಷಕ ಮೃತ್ಯು

ಮಂಗಳೂರು: ದೇರಳಕಟ್ಟೆ ಜಂಕ್ಷನ್‌ನಲ್ಲಿ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ದೈಹಿಕ ಶಿಕ್ಷಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೂಲತಃ ವಿಟ್ಲದ ಪ್ರಸ್ತುತ ದೇರಳಕಟ್ಟೆಯ ಜಲಾಲ್ ಬಾಗ್ ನಿವಾಸಿ ಇಸ್ಮಾಯೀಲ್ (59) ಮೃತಪಟ್ಟವರು.
ಶನಿವಾರ ಮಧ್ಯಾಹ್ನ ದೇರಳಕಟ್ಟೆಯ ಕನ್ನಡಕದ ಅಂಗಡಿಗೆ ತೆರಳಿ ಮರಳಿ ರಸ್ತೆ ದಾಟುವಾಗ ನಾಟೆಕಲ್‌ನಿಂದ ಕುತ್ತಾರ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಬೈಕ್ ಢಿಕ್ಕಿ ಹೊಡೆಯಿತು ಎಂದು ತಿಳಿದುಬಂದಿದೆ. ತಕ್ಷಣ ಅವರನ್ನು ಕಣಚೂರು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಂದ ಮತ್ತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿಮಧ್ಯೆ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿರುವ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬೈಕ್ ಸವಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಇಸ್ಮಾಯೀಲ್ ಅವರು ಆರಂಭದಲ್ಲಿ ಕಣಚೂರು ಪಬ್ಲಿಕ್ ಸ್ಕೂಲ್‌ನಲ್ಲಿ ದೈಹಿಕ ಶಿಕ್ಷಕರಾಗಿದ್ದರು. ಬಳಿಕ ದೇರಳಕಟ್ಟೆಯ ಪಬ್ಲಿಕ್ ಸ್ಕೂಲ್‌ನಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಸ್ಮಾಯೀಲ್ ನಾಟಕ ಕಲಾವಿದರೂ ಆಗಿದ್ದರು.





