ಲಾರಿ ಚಾಲಕನ ಕೊಲೆ ಪ್ರಕರಣ ಆರೋಪ ಸಾಬೀತು: ಅ.31ರಂದು ಶಿಕ್ಷೆಯ ಪ್ರಮಾಣ ಪ್ರಕಟ

ಮಂಗಳೂರು : ಟಿಪ್ಪರ್ ಲಾರಿ ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪವು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ ಸಾಬೀತಾಗಿದ್ದು, ಅ.31ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಧೀಶರು ಘೋಷಿಸಿದ್ದಾರೆ.
ಗುರವಾಯನಕೆರೆಯ ಕುವೆಟ್ಟು ಗ್ರಾಮ ಶಿವಾಜಿನಗರದ ಪ್ರದೀಪ್ (36) ಅವರನ್ನು ಕೊಲೆಗೈದ ಆರೋಪ ಎದುರಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಮೊಡಂತ್ಯಡ್ಕ ನ್ಯಾಯತರ್ಪು ಗ್ರಾಮದ ದಿನೇಶ್ (32) ಆರೋಪಿ.
ಘಟನೆಯ ವಿವರ: ಆರೋಪಿ ದಿನೇಶ್, ಹರೀಶ್ ಮತ್ತು ಕೊಲೆಯಾದ ಪ್ರದೀಪ್ ಒಂದೇ ಸಂಸ್ಥೆಯಲ್ಲಿ ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 2017ರ ನ.24ರಂದು ಹರೀಶ್ ಮತ್ತು ಪ್ರದೀಪ್ ಜತೆಯಲ್ಲಿದ್ದಾಗ ಹರೀಶನಿಗೆ ದಿನೇಶ್ ಕರೆ ಮಾಡಿ ಕೆಲಸದ ವಿಚಾರದಲ್ಲಿ ಬೈದಿದ್ದ ಎಂದು ಆರೋಪಿಸಲಾಗಿತ್ತು. ಹರೀಶ್ ತನ್ನ ಮೊಬೈಲ್‌ನ ಸ್ಪೀಕರ್ ಆನ್ ಮಾಡಿ ಅದನ್ನು ಪಕ್ಕದಲ್ಲಿದ್ದ ಪ್ರದೀಪ್‌ಗೂ ಕೇಳಿಸಿದ್ದರು. ಈ ವೇಳೆ ಪ್ರದೀಪ್ ಅವರು ದಿನೇಶನಲ್ಲಿ ‘ಯಾಕೆ ಬೈಯುತ್ತಿರುವೆ?’ ಎಂದು ಕೇಳಿದ್ದರು. ಈ ವೇಳೆ ದಿನೇಶ್ ‘ನಿನಗೆ ಗತಿ ಕಾಣಿಸುತ್ತೇನೆ’ ಎಂದು ಬೆದರಿಸಿದ್ದ ಎನ್ನಲಾಗಿದೆ. ಅದರಂತೆ ಅಂದು ಮಧ್ಯಾಹ್ನ 1.30ರ ವೇಳೆಗೆ ಹರೀಶ ಮತ್ತು ಪ್ರದೀಪ್ ಕಳಿಯಾ ಗ್ರಾಮದ ರೇಶ್ಮೆರೋಡ್ ಬಳಿ ರಿಕ್ಷಾದಲ್ಲಿದ್ದಾಗ ಅಲ್ಲಿಗೆ ಟಿಪ್ಪರ್‌ನಲ್ಲಿ ಬಂದಿದ್ದ ದಿನೇಶನು ಪ್ರದೀಪ್ ಜೊತೆ ಜಗಳಕ್ಕಿಳಿದಿದ್ದ ಎಂದು ದೂರಲಾಗಿತ್ತು.
ಬಳಿಕ ದಿನೇಶ್ ತನ್ನ ಟಿಪ್ಪರ್‌ನಲ್ಲಿದ್ದ ಲಿವರ್ ರಾಡ್‌ನಲ್ಲಿ ಪ್ರದೀಪ್‌ರ ತಲೆಗೆ ಹೊಡೆದಿದ್ದ. ಗಂಭೀರ ಗಾಯಗೊಂಡಿದ್ದ ಪ್ರದೀಪ್‌ರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲೇ ಪ್ರದೀಪ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು.
ಈ ಬಗ್ಗೆ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 25 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಅಲ್ಲದೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಪ್ರಮುಖ ಸಾಕ್ಷಿಯಾಗಿತ್ತು. ವಿಚಾರಣೆ ನಡೆಸಿದ್ದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಆರೋಪಿ ದಿನೇಶ್ ದೋಷಿ ಎಂದು ಶುಕ್ರವಾರ ತೀರ್ಪು ನೀಡಿದ್ದಾರೆ. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ಅ.31ಕ್ಕೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಸರಕಾರಿ ಅಭಿಯೋಜಕರಾಗಿದ್ದ ಶೇಖರ ಶೆಟ್ಟಿ ಅವರು ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಪ್ರಸುತ್ತ ಸರಕಾರಿ ಅಭಿಯೋಜಕಿಯಾಗಿರುವ ಜುಡಿತ್ ಒ.ಎಂ. ಕ್ರಾಸ್ತಾ ವಾದ ಮಂಡಿಸಿದ್ದರು.







