ರಾಜ್ಯದಲ್ಲಿ ಕ್ರೈಸ್ತರಿಗಿರುವ ಸೌಲಭ್ಯ ಬಳಸಿಕೊಳ್ಳಿ: ಕೆನಡಿ ಶಾಂತಕುಮಾರ್

ಉಡುಪಿ : ರಾಜ್ಯ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿಯ ಮೂಲಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಜಾರಿಗೊಳಿಸುತ್ತಿರುವ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಪ್ರಯೋಜನವನ್ನು ಸಮುದಾಯದ ಜನತೆ ಪಡೆದುಕೊಳ್ಳುವಂತೆ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜೆ. ಕೆನಡಿ ಶಾಂತಕುಮಾರ್ ಹೇಳಿದ್ದಾರೆ.
ಶನಿವಾರ ಉಡುಪಿಯ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಶ್ಚಿಯನ್ ಸಮುದಾಯಕ್ಕೆ ಇಲಾಖೆಯ ವತಿಯಿಂದ ದೊರೆಯುವ ಸೌಲಭ್ಯಗಳ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು.
2010ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವಾಗ ಅಸ್ತಿತ್ವಕ್ಕೆ ಬಂದ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯಾದ್ಯಂತ ಚರ್ಚ್‌ಗಳ ರಿಪೇರಿ, ಜೀರ್ಣೋದ್ಧಾರ, ಸ್ಮಶಾನಗಳಿಗೆ ಆವರಣ ಗೋಡೆ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಇದರೊಂದಿಗೆ ಕ್ರಿಶ್ಚಿಯನ್ ಸಮುದಾಯ ಭವನಗಳ ನಿರ್ಮಾಣಕ್ಕೆ, ಕ್ರಿಶ್ಚಿಯನ್ ಆಡಳಿತ ಸಂಸ್ಥೆಗಳು ನಡೆಸುವ ವೃದ್ಧಾಶ್ರಮಗಳು ಮತ್ತು ಅನಾಥಾಲಯಗಳಿಗೆ ಆಡಳಿತಾತ್ಮಕ ವೆಚ್ಚ ವನ್ನು ಪಾವತಿಸಲಾಗುವುದು ಎಂದರು.
ಕ್ರಿಶ್ಚಿಯನ್ ಸಮುದಾಯದ ಜನತೆಗೆ ಈ ಬಗ್ಗೆ ಮಾಹಿತಿಗಳ ಕೊರತೆ ಇದ್ದು, ಇದಕ್ಕಾಗಿ ರಾಜ್ಯಾದ್ಯಂತ ಸಂಚರಿಸಿ ಅರಿವು ಮೂಡಿಸಿ, ಸಮುದಾಯದ ಕಟ್ಟಕಡೆ ವ್ಯಕ್ತಿಗೂ ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ತಾನೀಗ ೧೬ ಜಿಲ್ಲೆಗಳ ಪ್ರವಾಸ ಮುಗಿಸಿದ್ದು, ಇದು ೧೭ನೇ ಜಿಲ್ಲೆಯಾಗಿದೆ ಎಂದರು.
೧೦೦ ವರ್ಷಗಳಷ್ಟು ಹಳೆಯದಾದ ಚರ್ಚ್‌ಗಳ ರಿಪೇರಿ ಹಾಗೂ ಜೀರ್ಣೋದ್ಧಾರಕ್ಕೆ ೫೦ ಲಕ್ಷ ರೂ.ಗಳವರೆಗೆ ಅನುದಾನ ಸಿಗುತ್ತದೆ. ಸಮುದಾಯ ಭವನಗಳ ನಿರ್ಮಾಣಕ್ಕೆ ನಗರ ಪ್ರದೇಶಗಳಲ್ಲಿ ಒಂದು ಕೋಟಿ ರೂ. ಹಾಗೂ ಗ್ರಾಮೀಣ ಭಾಗದಲ್ಲಿ ೫೦ ಲಕ್ಷ ರೂ.ನೀಡಲಾಗುತ್ತದೆ. ರಾಜ್ಯದ ಬೀದರ್, ರಾಯಚೂರು, ಯಾದಗಿರಿ, ಗುಲ್ಬರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಈವರೆಗೆ ೭೦ರಿಂದ ೭೫ರಷ್ಟು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ ಎಂದರು.
ಇದಲ್ಲದೇ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಫೆಲೋಶಿಪ್, ಪ್ರೀ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳಲ್ಲಿ ಪ್ರವೇಶಾವಕಾಶ, ಪ್ರೋತ್ಸಾಹಕ ಸಾಲ ಯೋಜನೆಗಳು, ಟ್ಯಾಕ್ಸಿ ಮತ್ತು ಗೂಡ್ಸ್ ವಾಹನಗಳ ಖರೀದಿಗೆ ಸಬ್ಸಿಡಿ, ನೇರ ಸಾಲ, ಶ್ರಮಶಕ್ತಿ ಸಾಲ, ಅರಿವು ಸಾಲ ನೀಡಲಾಗುತ್ತಿದ್ದು, ಸಮುದಾಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಕಲಿಕೆಗೆ ೨೦ ಲಕ್ಷರೂ.ವರೆಗೆ ಸಾಲ ನೀಡಲಾಗುತ್ತಿದೆ. ಈ ಎಲ್ಲಾ ಯೋಜನೆಗಳ ಸಂಪೂರ್ಣ ಪ್ರಯೋಜನಗಳನ್ನು ಸಮುದಾಯದ ಜನತೆ ಪಡೆಯಬೇಕು ಎಂದರು.
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಉಡುಪಿ, ಮೂಡುಬೆಳ್ಳೆ ಮತ್ತು ತೆಗ್ಗರ್ಸೆ ಯಲ್ಲಿ ಒಟ್ಟು ೩ ಕ್ರಿಶ್ಚಿಯನ್ ಸಮುದಾಯ ಭವನಗಳ ನಿರ್ಮಾಣಕ್ಕೆ ೧.೨೭ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನೂ ೨ ಸಮುದಾಯ ಭವನಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್‌ಕುಮಾರ್, ಆಲ್ವಿನ್ ಡಿಸೋಜ, ಸಲೀಂ ಅಂಬಾಗಿಲು, ಆಶೀಫ್, ಮಾರ್ಟಿನ್ ವೀನಸ್ ಮತ್ತಿತರರು ಉಪಸ್ಥಿತರಿದ್ದರು.







