ಸಿಎಂ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು: ಸುರ್ಜೆವಾಲಾ

ಬೆಂಗಳೂರು, ಅ.29: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಒಂದು ದಿನವೂ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಿ, ಜೈಲಿಗೆ ಅಟ್ಟಬೇಕು. ಅಲ್ಲದೆ, ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆಗ್ರಹಿಸಿದ್ದಾರೆ.
ಶನಿವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೀಪಾವಳಿ ಹಬ್ಬದ ಪ್ರಯುಕ್ತ ಪತ್ರಕರ್ತರಿಗೆ ತಲಾ ಒಂದು ಲಕ್ಷ ರೂ.ಗಳನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಇದನ್ನು ಖಂಡಿಸಿ ಅನೇಕ ಪತ್ರಕರ್ತರು, ಸಂಪಾದಕರು ಮುಖ್ಯಮಂತ್ರಿಗೆ ಪತ್ರ ಬರೆದು ಖಂಡನೆ ವ್ಯಕ್ತಪಡಿಸಿದ್ದಾರೆ ಎಂದರು.
ಒಂದು ಲಕ್ಷ ರೂ.ಲಂಚ ನೀಡಿರುವ ಪ್ರಕರಣದಲ್ಲಿ ಮುಖ್ಯಮಂತ್ರಿ ನೇರವಾಗಿ ಭಾಗಿಯಾಗಿದ್ದಾರೆ. ಅವರು ಕೇವಲ ಸಾರ್ವಜನಿಕವಾಗಿ ಕ್ಷಮೆ ಕೇಳಿದರೆ ಸಾಕಾಗುವುದಿಲ್ಲ. ಕರ್ನಾಟಕದಲ್ಲಿರುವ ಬಿಜೆಪಿ ಸರಕಾರ ದೇಶದ ಅತ್ಯಂತ ಭ್ರಷ್ಟ ಸರಕಾರ. ಬಿಜೆಪಿ ಪಕ್ಷವು ಭ್ರಷ್ಟಾಚಾರದ ಎಲ್ಲ ದಾಖಲೆಗಳನ್ನು ಮುರಿದಿದೆ ಎಂದು ಸುರ್ಜೆವಾಲ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘವು ಪ್ರಧಾನಿಗೆ ಪತ್ರ ಬರೆದು 40 ಪರ್ಸೆಂಟ್ ಕಮಿಷನ್ ಕುರಿತು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಯಾವುದೆ ಕಾಮಗಾರಿ ಮಾಡಬೇಕಾದರು 40 ಪರ್ಸೆಂಟ್ ಕಮಿಷನ್ ನೀಡಲೇಬೇಕು. ಇಲ್ಲದಿದ್ದರೆ, ಕೆಲಸ ಮಾಡಲು ಆಗುವುದಿಲ್ಲ ಎಂದು ಗುತ್ತಿಗೆದಾರರ ಸಂಘ ಸ್ಪಷ್ಟವಾಗಿ ತಿಳಿಸಿದೆ ಎಂದು ಅವರು ಹೇಳಿದರು.
13 ಸಾವಿರ ಖಾಸಗಿ ಶಾಲೆಗಳ ಮುಖ್ಯಸ್ಥರು ಪ್ರಧಾನಿಗೆ ಪತ್ರ ಬರೆದು, ಶಾಲೆಗಳಿಗೆ ಬಿಡುಗಡೆಯಾಗುವ ಪ್ರತಿಯೊಂದು ಅನುದಾನದಲ್ಲಿಯೂ 40 ಪರ್ಸೆಂಟ್ ಕಮಿಷನ್ ಅನ್ನು ಬೊಮ್ಮಾಯಿ ಸರಕಾರಕ್ಕೆ ನೀಡಬೇಕು ಎಂದು ಗಮನ ಸೆಳೆದಿದ್ದಾರೆ. ಸಂತೋಷ್ ಪಾಟೀಲ್ ಎಂಬ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ 40 ಪರ್ಸೆಂಟ್ ಕೊಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡರು ಎಂದು ಅವರು ತಿಳಿಸಿದರು.
ಅಷ್ಟೇ ಅಲ್ಲ, ಮಠಗಳಿಗೆ ನೀಡುವ ಅನುದಾನದಲ್ಲಿಯೂ ಬಿಜೆಪಿ ಸರಕಾರ 40 ಪರ್ಸೆಂಟ್ ಕಮಿಷನ್ ಕೇಳುತ್ತದೆ ಎಂದು ದಿಂಗಾಲೇಶ್ವರ ಸ್ವಾಮಿ ಆರೋಪಿಸಿದ್ದಾರೆ. ಪಿಎಸ್ಸೈಗಳ ನೇಮಕಾತಿಗಾಗಿ 80 ಲಕ್ಷ ರೂ. ಪಡೆದಿರುವುದು ಬೆಳಕಿಗೆ ಬಂದಿದೆ. ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳು ಈ ಅಕ್ರಮದಿಂದಾಗಿ ಜೈಲು ಪಾಲಾಗಿದ್ದಾರೆ ಎಂದು ಸುರ್ಜೆವಾಲ ಹೇಳಿದರು.
ಲೋಕೋಪಯೋಗಿ ಎಂಜಿನಿಯರ್ ಗಳು, ಸಹಾಯಕ ಪ್ರಾಧ್ಯಾಪಕರು, ಸಹಕಾರಿ ಬ್ಯಾಂಕುಗಳ ನೇಮಕಾತಿಯಲ್ಲೂ ಅಕ್ರಮ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡುವ ಮೊಟ್ಟೆಗಳ ಖರೀದಿಯಲ್ಲಿಯೂ ಅಕ್ರಮ ನಡೆದಿದೆ. ಇತ್ತೀಚೆಗಷ್ಟೆ ಪೊಲೀಸ್ ಇನ್ಸ್‍ಪೆಕ್ಟರ್ ಒಬ್ಬರು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಾಗಿ 80 ಲಕ್ಷ ರೂ. ನೀಡಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ಈ ವಿಷಯವನ್ನು ಸ್ವತಃ ಬೊಮ್ಮಾಯಿ ಸರಕಾರದಲ್ಲಿ ಸಚಿವರಾಗಿರುವ ಎಂ.ಟಿ.ಬಿ.ನಾಗರಾಜು ಹೇಳಿದ್ದಾರೆ ಎಂದು ಅವರು ತಿಳಿಸಿದರು.







