ಟೋಲ್ ಗೇಟ್ ತೆರವುಗೊಳಿಸುವಂತೆ ಒತ್ತಾಯಿಸಿ ಅಹೋ ರಾತ್ರಿ ಧರಣಿ
ಎರಡನೇ ದಿನ
ಸುರತ್ಕಲ್, ಅ.29: ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಹೋ ರಾತ್ರಿಯ ಧರಣಿ ಸತ್ಯಾಗ್ರಹದಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನೆಲಪಾಡ್ ಭಾಗವಹಿಸಿದರು.
ಧರಣಿಯ ಎರಡನೇ ದಿನವಾದ ಶನಿವಾರ ಧರಣಿ ನಿರತರನ್ನು ಭೇಟಿಯಾಗಿ ಮಾತನಾಡಿದ ನೆಲಪಾಡ್, ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಿಗೆ ವೋಟು ಹಾಕಿರುವವರು ಬೇಡದಾಗಿದೆ ಅವರಿಗೆ ನವಯುಗ ಸಂಸ್ಥೆ ನೀಡುವ ಕಮಿಷನ್ ಬೇಕು ಹಾಗಾಗಿ ಓಟು ಹಾಕಿದವರ ಕೈಬಿಡುತ್ತಿದ್ದಾರೆ ಎಂದು ಆರೋಪಿಸಿದರು.
ಒಂದೆಡೆ ಜಿಲ್ಲೆಯ ಸಂಸದರಾಗಿದ್ದರೆ ಇನ್ನೊಂದು ಭಾಗದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಅವರು ಜಿಲ್ಲೆಯ ಜನತೆಯ ಜವಾಬ್ದಾರಿ ವಹಿಸಬೇಕಿತ್ತು. ಆದರೆ ಅವರು ಅದೆಲ್ಲವನ್ನು ಮರೆತು ಟೋಲ್ ಗೇಟ್ ನವರಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿರುವುದಾಗಿ ಆರೋಪ ಮಾಡಿದರು.
ಟೋಲ್ ಗೇಟ್ ತೆರವಾಗುವವರೆಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಧರಣಿಯಲ್ಲಿ ನಿರಂತರ ಭಾಗವಹಿಸುತ್ತಾ ಹೋರಾಟಗಾರರಿಗೆ ಬೆಂಬಲವಾಗಿದ್ದೇವೆ ಎಷ್ಟು ದಿನವಾದರೂ ಸರಿ ನಮ್ಮ ಬೆಂಬಲ ಸದಾ ಇದೆ ಎಂದು ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಅವರಿಗೆ ಭರವಸೆ ನೀಡಿದರು.
ಈ ಸಂದರ್ಭ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ, ಶಾಸಕ ಯುಟಿ ಖಾದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಯುವ ಕಾಂಗ್ರೆಸ್ ನೇತಾರರು, ಕಾರ್ಯಕರ್ತರು ಹೋರಾಟ ಸಮಿತಿಯ ಪದಾಧಿಕಾರಿಗಳು ವಿವಿಧ ಸಮಾನಮಸ್ಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.