ಸೊಮಾಲಿಯಾ: ಬಾಂಬ್ ಸ್ಫೋಟ ಕನಿಷ್ಟ 100 ಮಂದಿ ಮೃತ್ಯು

ಮೊಗದಿಶು, ಅ.30: ಸೊಮಾಲಿಯಾದ ರಾಜಧಾನಿ ಮೊಗದಿಶುವಿನ ಶಿಕ್ಷಣ ಸಚಿವಾಲಯದ ಹೊರಗಡೆ ಸಂಭವಿಸಿದ ಅವಳಿ ಕಾರು ಬಾಂಬ್ ಸ್ಫೋಟದಲ್ಲಿ ಕನಿಷ್ಟ 100 ಮಂದಿ ಮೃತಪಟ್ಟಿರುವುದಾಗಿ ರವಿವಾರ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.
ಶಿಕ್ಷಣ ಸಚಿವಾಲಯದ ಹೊರಗಡೆ ಮೊದಲ ಬಾಂಬ್ ಸ್ಫೋಟಿಸಿದೆ. ಮೃತರನ್ನು ಮತ್ತು ಗಾಯಗೊಂಡವರನ್ನು ಸಾಗಿಸಲು ಆಂಬ್ಯುಲೆನ್ಸ್ ಅಲ್ಲಿಗೆ ಬಂದಾಗ ಮತ್ತೊಂದು ಬಾಂಬ್ ಸ್ಫೋಟಿಸಿದ್ದು ಅಲ್ಲಿ ಸೇರಿದ್ದ ಜನತೆ ದಿಕ್ಕೆಟ್ಟು ಓಡಿದರು. ಆಂಬ್ಯುಲೆನ್ಸ್ ಜಖಂಗೊಂಡಿದೆ ಮತ್ತು ಸಮೀಪದ ಕಟ್ಟಡದ ಕಿಟಕಿ ಬಾಗಿಲು ಛಿದ್ರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತೋಳುಗಳಲ್ಲಿ ಮಕ್ಕಳನ್ನು ಎತ್ತಿಕೊಂಡಿದ್ದ ತಾಯಂದಿರು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರು, ಶಿಕ್ಷಣ ಪಡೆಯಲೆಂದು ಬಂದ ವಿದ್ಯಾರ್ಥಿಗಳು, ಕುಟುಂಬದ ಜೀವನ ನಿರ್ವಹಣೆಗೆ ಹೆಣಗುತ್ತಿರುವ ಉದ್ಯಮಿಗಳು ಅವಳಿ ಕಾರು ಬಾಂಬ್ ಸ್ಫೋಟಕ್ಕೆ ಬಲಿಯಾದವರಲ್ಲಿ ಸೇರಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಮೃತರ ಸಂಖ್ಯೆ ಹೆಚ್ಚಬಹುದು’ ಎಂದು ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷ ಹಸನ್ ಶೇಖ್ ಮೊಹಮದ್ ಹೇಳಿದ್ದಾರೆ. ಯಾವುದೇ ಸಂಘಟನೆ ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ. ಆದರೆ ಐಸಿಸ್‌ನ ಸಹಸಂಸ್ಥೆ ಅಲ್ ಶಬಾಬ್ ಇದಕ್ಕೆ ಕಾರಣವಾಗಿರಬಹುದು ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.







