'ಪತ್ರಕರ್ತರಿಗೆ ಗಿಫ್ಟ್': ಉಡುಗೊರೆ ನೀಡುವ ಬಗ್ಗೆ ನಾನು ಯಾರಿಗೂ ಸೂಚನೆ ನೀಡಿಲ್ಲ: ಸಿಎಂ ಬೊಮ್ಮಾಯಿ
'ಕಾಂಗ್ರೆಸ್ ಗೆ ಈ ವಿಚಾರವಾಗಿ ಮಾತನಾಡುವ ನೈತಿಕ ಹಕ್ಕಿಲ್ಲ'

ಬೆಂಗಳೂರು, ಅ.30: 'ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ದೀಪಾವಳಿಯ ನಗದು ಉಡುಗೊರೆ ನೀಡಲಾಗಿದೆ ಎಂಬುದು ಕಾಂಗ್ರೆಸ್ಸಿನ ಟೂಲ್ ಕಿಟ್ ನ ಪರಿಣಾಮ. ಸುಳ್ಳನ್ನು ಸೃಷ್ಟಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಉಡುಗೊರೆ ನೀಡುವ ಬಗ್ಗೆ ತಾನು ಯಾರಿಗೂ ಸೂಚನೆ ನೀಡಿಲ್ಲ. ಲೋಕಾಯುಕ್ತ ತನಿಖೆಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಅವರು ಇಂದು ಬೆಳಗ್ಗೆ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
'ಪತ್ರಕರ್ತರಿಗೆ ಗಿಫ್ಟ್' ವಿಚಾರವಾಗಿ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಕಾಂಗ್ರೆಸ್ ಇದ್ದಾಗ ಹಲವಾರು ಜನರಿಗೆ ಏನೇನು ಉಡುಗೊರೆಗಳನ್ನು ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಪತ್ರಿಕೆಗಳಲ್ಲಿ ವರದಿಯೂ ಆಗಿದೆ. ಐ ಫೋನ್, ಲ್ಯಾಪ್ ಟಾಪ್, ಬಂಗಾರದ ನಾಣ್ಯಗಳನ್ನೇ ಕೊಟ್ಟಿದ್ದಾರೆ. ಅವರಿಗೆ ಮಾತನಾಡಲು ಯಾವ ನೈತಿಕ ಹಕ್ಕೂ ಇಲ್ಲ ಎಂದರು.
ಗಿಫ್ಟ್ ವಿಚಾರವಾಗಿ ಯಾರೋ ಒಬ್ಬರು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದು, ತನಿಖೆಯಾಗುತ್ತದೆ. ಇದರ ಅರ್ಥ ಎಲ್ಲಾ ಪತ್ರಕರ್ತರು ಉಡುಗೊರೆಯನ್ನು ಪಡೆದಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ. ನಿನ್ನೆ ಕಾಂಗ್ರೆಸ್ ವಕ್ತಾರ ಬಹಳ ಕೆಟ್ಟದಾಗಿ ಅದನ್ನು ವ್ಯಾಖ್ಯಾನ ಮಾಡಿದ್ದು ಅದನ್ನು ನಾನು ಖಂಡಿಸುತ್ತೇನೆ ಎಂದರು.





