ಬ್ರಹ್ಮಶ್ರೀ ನಾರಾಯಣಗುರು ಕೋಶ ಮೂಗಿಗೆ ತುಪ್ಪ ಸವರುವ ಯತ್ನ: ಪದ್ಮರಾಜ್ ಆರ್. ಟೀಕೆ
'ಕೋಶ ಹಲ್ಲಿಲ್ಲದ ಹಾವು ಅಷ್ಟೇ, ನಿಗಮದ ಶೇ.5ರಷ್ಟು ಅಭಿವೃದ್ಧಿ ಕಾರ್ಯವೂ ಇದರಿಂದ ಸಾಧ್ಯವಿಲ್ಲ'

ಬೆಂಗಳೂರು, ಅ.30: ಬಿಲ್ಲವ, ಈಡಿಗ, ನಾಮಧಾರಿ, ನಾಯ್ಕ ಸೇರಿದಂತೆ ಸುಮಾರು 26 ಪಂಗಡಗಳ ಅಭಿವೃದ್ಧಿ ದೃಷ್ಟಿಕೋನವಿಟ್ಟು ರಾಜ್ಯ ಸರಕಾರ ಬ್ರಹ್ಮಶ್ರೀ ನಾರಾಯಣಗುರು ಕೋಶ ಸ್ಥಾಪಿಸಿ ಆದೇಶ ಮಾಡಿದೆ. ಆದರೆ ಇದೊಂದು ಕೇವಲ ಓಲೈಕೆಯ ತಂತ್ರ ಅಷ್ಟೆ. ಇದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಾಗದು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದ್ದಾರೆ.
ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು ಎನ್ನುವುದು ಬಿಲ್ಲವ, ಈಡಿಗ ಸಮಾಜದ ಬೇಡಿಕೆಯಾಗಿತ್ತು. ಪ್ರಬಲ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಸಮುದಾಯದ ಹೆಸರಲ್ಲಿ ನಿಗಮ ಸ್ಥಾಪನೆ ಮಾಡಲು ಸಾಧ್ಯವಾಗುತ್ತದೆ. ಆದರೆ ಅತ್ಯಂತ ಹಿಂದುಳಿದ ಬಿಲ್ಲವ, ಈಡಿಗರ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುವಂತೆ ಒತ್ತಾಯ ಮಾಡುತ್ತಾ ಬಂದರೂ ಅದನ್ನು ಗಮನಕ್ಕೆ ತೆಗೆದುಕೊಳ್ಳದೆ, ಬ್ರಹ್ಮಶ್ರೀ ನಾರಾಯಣ ಗುರು ಕೋಶ ಸ್ಥಾಪಿಸಿ ಆದೇಶ ಹೊರಡಿಸಿರುವದು ಮೂಗಿಗೆ ತುಪ್ಪ ಸವರುವ ಪ್ರಯತ್ನ ಅಷ್ಟೇ. ಇಲ್ಲಿ ಉನ್ನತ ಶ್ರೇಣಿಯ ಅಧಿಕಾರಿಯನ್ನು ನೇಮಕ ಮಾಡಿ ಏನು ಅಭಿವೃದ್ಧಿ ಸಾಧ್ಯ. ಇದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವುದರಿಂದ ಇದನ್ನು ಯಾವಾಗಬೇಕಾದರೂ ಹಿಂದೆಗೆದುಕೊಳ್ಳಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಗಮ ಮಂಡಳಿ ಸ್ವಾಯತ್ತ ಸಂಸ್ಥೆ. ನಿಗಮದ ಶೇ.5ರಷ್ಟು ಅಭಿವೃದ್ಧಿ ಕಾರ್ಯವೂ ಇದರಿಂದ ಸಾಧ್ಯವಿಲ್ಲ. ಕೋಶಕ್ಕೆ ನೇಮಕ ಮಾಡುವ ಅಧಿಕಾರಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸುವುದಿದ್ದರೂ ಸರಕಾರದ ಅಧೀನದ ಅಧಿಕಾರಿಗಳ ಒಪ್ಪಿಗೆ ಇಲ್ಲದೆ ಮಾಡುವಂತಿಲ್ಲ. ಆದ್ದರಿಂದ ಕೋಶ ಎನ್ನುವುದು ಹಲ್ಲಿಲ್ಲದ ಹಾವು ಅಷ್ಟೇ ಎಂದು ಟೀಕಿಸಿದ್ದಾರೆ.
ನಾರಾಯಣ ಗುರುಗಳ ಅನುಯಾಯಿಗಳಿಗೆ ಜ್ಞಾನ ಬಂದಿದೆ. ಚುನಾವಣೆ ಹತ್ತಿರ ಬರುವಾಗ ಇಂತಹ ಕಪಟ ನಾಟಕಗಳು ಬೇಡ. ಇನ್ನು ಯಾವುದೂ ನಡೆಯಲ್ಲ. ಸಮಾಜದವರು ಎಲ್ಲವನ್ನೂ ಗಮನಿಸುತ್ತಾ ಇರುತ್ತಾರೆ. ಶೀಘ್ರದಲ್ಲಿ ನಿಗಮ ನೀಡಬೇಕು, ವಿಶೇಷ ಅನುದಾನ ಘೋಷಿಸಬೇಕು ಮತ್ತು ಅದಕ್ಕೆ ಸಮುದಾಯದವರನ್ನೇ ಅಧ್ಯಕ್ಷರು, ನಿರ್ದೇಶಕರನ್ನು ನೇಮಕ ಮಾಡಬೇಕೆಂಬ ಬೇಡಿಕೆಯಿಂದ ನಾವು ಹಿಂದೆ ಸರಿಯಲ್ಲ ಸರಕಾರ ಮತ್ತೊಮ್ಮೆ ಪರಿಶೀಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಿ ಎನ್ನುವುದು ಬಿಲ್ಲವ, ಈಡಿಗ ಸಮಾಜದ ಆಗ್ರಹ ಎಂದವರು ಹೇಳಿದ್ದಾರೆ.







