ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಹಣ ನೀಡಿರುವ ಕುರಿತು ತನಿಖೆ ನಡೆಯಲಿ: ಎಚ್. ವಿಶ್ವನಾಥ್ ಒತ್ತಾಯ

ಮೈಸೂರು: ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಜತೆ ಹಣ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ವಿಚಾರವಾಗಿ ಸರ್ಕಾರ ಸುಮ್ಮನಾಗದೇ ತನಿಖೆ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಗೆ ಸ್ವೀಟ್ಸ್ ನೀಡಿ ಮಾತನಾಡಿದ ಅವರು, ಪತ್ರಕರ್ತರೊಂದಿಗೆ 40 ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದೇನೆ. ಉಡುಗೊರೆಯಾಗಿ ಸ್ವೀಟ್ಸ್, ಹೂ ನೀಡುತ್ತ ಬಂದಿದ್ದೇನೆ. ಈಗ ಮುಖ್ಯಮಂತ್ರಿಗಳ ಕಚೇರಿಯಿಂದ ಸ್ವೀಟ್ ಬಾಕ್ಸ್, ವಾಚ್, ಸ್ಕ್ಯಾಚ್, ಕ್ಯಾಶ್ ನೀಡಲಾಗಿದೆ. ಈ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಬೇಕು. ಇವರ ಮಾಧ್ಯಮ ಕಾರ್ಯದರ್ಶಿಯನ್ನು ಕೂಡಲೇ ಹೊರಹಾಕಬೇಕು ಎಂದು ಆಗ್ರಹಿಸಿದರು.
ಪತ್ರಕರ್ತರಿಗೆ ಆಮಿಷ ಒಡ್ಡಿರುವುದು ಚುನಾವಣೆಗೆ ಈಗಲೇ ಇನ್ವೆಸ್ಟ್ ಮೆಂಟ್ ಶುರುವಾಯಿತೇ? ಸಂವಿಧಾನದ ನಾಲ್ಕನೇ ಅಂಗ ಸತ್ಯದ ಸುದ್ದಿ ಕೊಲೆ ಮಾಡಲಿಕ್ಕೆ ಹೋಗುತ್ತಿದ್ದೇವೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರು ಹಿಂದೆ ಪತ್ರಕರ್ತರಿಗ ಗಿಫ್ಟ್ ಕೊಟ್ಟಿದ್ದಾರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರು ಖಾಸಗಿಯಾಗಿ ವೈಯಕ್ತಿವಾಗಿ ಉಡುಗೊರೆ ಕೊಟ್ಟಿರಬಹುದು ಎಂದರು.