ಪ್ರಜಾಪ್ರಭುತ್ವವನ್ನು ಉಳಿಸಿ: ಸಿಜೆಐಗೆ ಮಮತಾ ಬ್ಯಾನರ್ಜಿ ಆಗ್ರಹ

ಕೋಲ್ಕತಾ,ಅ.30: ದೇಶದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಉಸಿರುಗಟ್ಟಿಸಲಾಗುತ್ತಿದೆ ಎಂದು ರವಿವಾರ ಇಲ್ಲಿ ಕಳವಳಗಳನ್ನು ವ್ಯಕ್ತಪಡಿಸಿದ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು,ಈ ಪ್ರವೃತ್ತಿಯು ಮುಂದುವರಿದರೆ ದೇಶವು ಅಧ್ಯಕ್ಷೀಯ ಮಾದರಿಯ ಸರಕಾರದತ್ತ ಸಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. ಪ್ರಜಾಪ್ರಭುತ್ವ ಮತ್ತು ದೇಶದ ಒಕ್ಕೂಟ ಸ್ವರೂಪದ ರಕ್ಷಣೆಯನ್ನು ಖಚಿತಪಡಿಸುವಂತೆ ಅವರು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ರನ್ನು ಆಗ್ರಹಿಸಿದರು.
ಅವರು ಇಲ್ಲಿಯ ರಾಷ್ಟ್ರೀಯ ನ್ಯಾಯವಿಜ್ಞಾನಗಳ ವಿವಿ (ಎನ್‌ಯುಜೆಎಸ್)ಯ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ವಿವಿಯ ಕುಲಾಧಿಪತಿಗಳಾಗಿರುವ ಸಿಜೆಐ ನ್ಯಾ.ಯು.ಯು.ಲಲಿತ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜನತೆಯನ್ನು ಕಿರುಕುಳಗಳಿಂದ ರಕ್ಷಿಸುವಂತೆ ನ್ಯಾಯಾಂಗವನ್ನು ಆಗ್ರಹಿಸಿದ ಬ್ಯಾನರ್ಜಿ,ಸಮಾಜದ ಒಂದು ನಿರ್ದಿಷ್ಟ ವರ್ಗವು ಎಲ್ಲ ಪ್ರಜಾಸತ್ತಾತ್ಮಕ ಅಧಿಕಾರವನ್ನು ವಶಪಡಿಸಿಕೊಳ್ಳುತ್ತಿದೆ ಎಂದರು. ಪ್ರಜಾಪ್ರಭುತ್ವ ಎಲ್ಲಿದೆ ಎಂದು ಪ್ರಶ್ನಿಸಿದ ಅವರು,‘ದಯವಿಟ್ಟು ಪ್ರಜಾಪ್ರಭುತ್ವವನ್ನು ರಕ್ಷಿಸಿ’ಎಂದು ನ್ಯಾ.ಲಲಿತ್ ಅವರನ್ನು ಕೇಳಿಕೊಂಡರು.
ಮಾಧ್ಯಮ ಪಕ್ಷಪಾತದ ವಿರುದ್ಧ ದಾಳಿ ನಡೆಸಿದ ಬ್ಯಾನರ್ಜಿ,‘ಅವು ಯಾರನ್ನು ಬೇಕಾದರೂ ನಿಂದಿಸಬಹುದೇ? ಅವು ಯಾರನ್ನು ಬೇಕಾದರೂ ಆರೋಪಿಯನ್ನಾಗಿಸಬಹುದೇ? ಸರ್,ನಮ್ಮ ಮರ್ಯಾದೆಯು ನಮ್ಮ ಪ್ರತಿಷ್ಠೆಯಾಗಿದೆ. ನಮ್ಮ ಮರ್ಯಾದೆಯನ್ನು ಸೂರೆಗೈದರೆ ಎಲ್ಲವನ್ನೂ ಸೂರೆಗೈದಂತೆ ’ ಎಂದು ಹೇಳಿದರು. ತೀರ್ಪೊಂದನ್ನು ಪ್ರಕಟಿಸುವ ಮುನ್ನ ಬಹಳಷ್ಟು ಸಂಗತಿಗಳು ನಡೆಯುತ್ತವೆ ಎಂದ ಅವರು,‘ಇದನ್ನು ಹೇಳಲು ನನಗೆ ವಿಷಾದವಾಗುತ್ತದೆ. ನಾನು ತಪ್ಪು ಹೇಳಿದ್ದೇನೆಂದು ನೀವು ಭಾವಿಸಿದರೆ ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ ’ಎಂದರು.
ಎನ್‌ಯುಜೆಎಸ್ ವಿಶ್ವದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿದೆ ಎಂದು ಪ್ರಶಂಸಿಸಿದ ಬ್ಯಾನರ್ಜಿ ಹಾಲಿ ಸಿಜೆಐ ನಿರ್ವಹಿಸಿದ ಪಾತ್ರಕ್ಕಾಗಿ ಅವರನ್ನು ಶ್ಲಾಘಿಸಿದರು.‘ ನಾನು ನ್ಯಾ.ಯು.ಯು.ಲಲಿತ್ ಅವರನ್ನು ಅಭಿನಂದಿಸಲೇಬೇಕು. ಇದನ್ನು ಹೇಳಲು ಈ ವೇದಿಕೆಯನ್ನು ನಾನು ಬಳಸಬಹುದೇ ಎನ್ನುವುದು ನನಗೆ ತಿಳಿದಿಲ್ಲ,ಆದರೆ ಎರಡು ತಿಂಗಳುಗಳಲ್ಲಿ ಅವರು ನ್ಯಾಯಾಂಗವೆಂದರೇನು ಎನ್ನುವುದನ್ನು ತೋರಿಸಿದ್ದಾರೆ ’ಎಂದರು.
ತಾನು ಪ್ರಸ್ತಾಪಿಸಿದ ವಿಷಯವನ್ನು ಇನ್ನಷ್ಟು ಸ್ಪಷ್ಟಗೊಳಿಸಿದ ಬ್ಯಾನರ್ಜಿ,ಜನರು ನ್ಯಾಯಾಂಗದಲ್ಲಿ ತಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ತಾನು ಹೇಳುತ್ತಿಲ್ಲ,ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿಯು ತೀವ್ರವಾಗಿ ಹದಗೆಟ್ಟಿದೆ. ನ್ಯಾಯಾಂಗವು ಜನರನ್ನು ಅನ್ಯಾಯದಿಂದ ರಕ್ಷಿಸಬೇಕು ಮತ್ತು ಅವರ ಕೂಗುಗಳನ್ನು ಆಲಿಸಬೇಕು. ಈಗಿನ ಸ್ಥಿತಿಯಲ್ಲಿ ಜನರು ಮುಚ್ಚಿದ ಬಾಗಿಲುಗಳ ಹಿಂದೆ ರೋದಿಸುತ್ತಿದ್ದಾರೆ ಎಂದು ಹೇಳಿದರು.







