ನದಿಮಾರ್ಗ್ ಪಂಡಿತರ ಹತ್ಯಾಕಾಂಡ ವಿಚಾರಣೆ ಪುನರಾರಂಭಕ್ಕೆ ಜಮ್ಮು ಕಾಶ್ಮೀರ ಹೈಕೋರ್ಟ್ ಆದೇಶ

ಶ್ರೀನಗರ, ಅ. 30: ನದಿಮಾರ್ಗ್ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಪ್ರಕರಣವನ್ನು ಆದಷ್ಟು ಶೀಘ್ರ ಪುನರಾರಂಭಿಸಲು ಜಮ್ಮು ಹಾಗೂ ಕಾಶ್ಮೀರ, ಲಡಾಖ್‌ನ ಉಚ್ಚ ನ್ಯಾಯಾಲಯ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.
ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನದಿಮಾರ್ಗ್ ಗ್ರಾಮದಲ್ಲಿ 2003ರಲ್ಲಿ ಶಂಕಿತ ‘ಯೋತ್ಪಾದಕರು ಯೋಧರ ಸಮವಸ್ತ್ರ ಧರಿಸಿ 24 ಕಾಶ್ಮೀರಿ ಪಂಡಿತರನ್ನು ಹತ್ಯೆಗೈದಿದ್ದರು. ಈ ಪ್ರಕರಣದ ವಿಚಾರಣೆ 2011ರಲ್ಲಿ ಅಂತ್ಯಗೊಂಡಿತ್ತು.
ಈಗ ಉಚ್ಚ ನ್ಯಾಯಾಲಯ ವೀಡಿಯೊ ಕಾನ್ಫರೆನ್ಸ್ ಮೂಲಕ ಸಾಕ್ಷಿಗಳ ವಿಚಾರಣೆ ನಡೆಸುವಂತೆ ಹಾಗೂ ಈ ಪ್ರಕರಣವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ತ್ವರಿತವಾಗಿ ಕಲಾಪಗಳನ್ನು ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ವಿಚಾರಣಾ ನ್ಯಾಯಾಲಯವನ್ನು ದೂಷಿಸಿರುವ ಉಚ್ಚ ನ್ಯಾಯಾಲಯ ಹೇಯ ರೀತಿಯ ಈ ಪ್ರಕರಣದಲ್ಲಿ ಸತ್ಯವನ್ನು ಅನಾವರಣಗೊಳಿಸಲು ಅದು ಎಲ್ಲ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸಲಿಲ್ಲ ಎಂದು ಗಮನಿಸಿತು.
ನದಿಮಾರ್ಗ್ ಪ್ರಕರಣದ ಪ್ರಸಕ್ತ ಆದೇಶಕ್ಕೆ ಈ ಹಿಂದೆ ಜೂನ್ ಆರಂಭದಲ್ಲಿ ನೀಡಿದ ಆದೇಶ ಆಧಾರವಾಗಿದೆ. ಹೊಸ ಆದೇಶದಿಂದಾಗಿ 11 ವರ್ಷಗಳ ಬಳಿಕ ಈ ಪ್ರಕರಣ ವಿಚಾರಣೆ ಮತ್ತೆ ಆರಂಭವಾಗುತ್ತಿದೆ.
ಪ್ರಕರಣವನ್ನು ಅಂತ್ಯಗೊಳಿಸುವ ವಿರುದ್ಧ ಸಲ್ಲಿಸಲಾದ ಪರಿಷ್ಕರಣಾ ಅರ್ಜಿ ತಿರಸ್ಕರಿಸಿದ ಈ ಹಿಂದಿನ ಆದೇಶವನ್ನು ಉಚ್ಚ ನ್ಯಾಯಾಲಯ ಜೂನ್‌ನಲ್ಲಿ ನೆನಪಿಸಿಕೊಂಡಿತ್ತು.
2003 ಮಾರ್ಚ್ 23ರಂದು ಪುಲ್ವಾಮಾ ಜಿಲ್ಲೆಯ ಶೋಪಿಯಾನದ ಸಮೀಪದ ನದಿಮಾರ್ಗ್ ಗ್ರಾಮದಲ್ಲಿ ಶಂಕಿತ ‘ಯೋತ್ಪಾದಕರು 11 ಪುರುಷರು, 11 ಮಹಿಳೆಯರು ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದಿದ್ದರು. ಈ ಘಟನೆಯಲ್ಲಿ 52 ಮಂದಿ ಗಾಯಗೊಂಡಿದ್ದರು.
ಶಂಕಿತ ಭಯೋತ್ಪಾದಕರು ಯೋಧರ ಸಮವಸ್ತ್ರ ಧರಿಸಿ ಗ್ರಾಮ ಪ್ರವೇಶಿಸಿದ್ದರು. ಗ್ರಾಮ ನಿವಾಸಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಿ ಹತ್ಯೆಗೈದಿದ್ದರು. ಈ ಸಂದರ್ಭ ಪಂಡಿತರಿಗೆ ರಕ್ಷಣೆ ನೀಡಲು ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗಳನ್ನು ಶಂಕಿತ ಭಯೋತ್ಪಾದಕರು ನಿಶ್ಯಸ್ತ್ರಗೊಳಿಸಿದ್ದರು ಎಂದು ಆಗಿನ ಕಾಶ್ಮೀರ ವಲಯದ ಪೊಲೀಸ್ ವರಿಷ್ಠ ಕೆ. ರಾಜೇಂದ್ರ ಅವರು ತಿಳಿಸಿದ್ದಾರೆ.
‘‘ಅವರು ಮೊದಲು ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು. ಅನಂತರ ಪಂಡಿತರ ಮೇಲೆ ವಿವೇಚನಾರಹಿತವಾಗಿ ಗುಂಡು ಹಾರಿಸಿದರು’’ ಎಂದು ರಾಜೇಂದ್ರ ತಿಳಿಸಿದ್ದಾರೆ.







