ಪತಿಯ ಮೇಲಿನ ಮಾರಣಾಂತಿಕ ದಾಳಿಯಿಂದ ಆಘಾತವಾಗಿದೆ: US ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ

ವಾಷಿಂಗ್ಟನ್: ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತಮ್ಮ ಕ್ಯಾಲಿಫೋರ್ನಿಯಾದ ಮನೆಯಲ್ಲಿ ತನ್ನ ಪತಿಯ ಮೇಲೆ ನಡೆದ ಹಿಂಸಾತ್ಮಕ ದಾಳಿಯಿಂದ ತಾನು ಮತ್ತು ತನ್ನ ಕುಟುಂಬವು ಆಘಾತಕ್ಕೊಳಗಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಮುಂಜಾನೆ ಸ್ಯಾನ್ ಫ್ರಾನ್ಸಿಸ್ಕೋದ ಅವರ ಮನೆಗೆ ನುಗ್ಗಿದ ವ್ಯಕ್ತಿಯೋರ್ವ ಸ್ಪೀಕರ್ ಪತಿ ಪಾಲ್ ಪೆಲೋಸಿಯ ಮೇಲೆ ಸುತ್ತಿಗೆಯಿಂದ ದಾಳಿ ಮಾಡಿದ್ದರು.
"ನನ್ನ ಪತಿಯ ಮೇಲಿನ ಮಾರಣಾಂತಿಕ ದಾಳಿಯಿಂದ ನಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ನಾನು ಎದೆಗುಂದಿದ್ದೇವೆ ಮತ್ತು ಆಘಾತಕ್ಕೊಳಗಾಗಿದ್ದೇವೆ" ಎಂದು ಪೆಲೋಸಿ ಶನಿವಾರ ಸಂಜೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಪತ್ರದಲ್ಲಿ ಘಟನೆಯ ಬಗ್ಗೆ ಹೇಳಿದ್ದಾರೆ.
"ಕಾನೂನು ಮತ್ತು ತುರ್ತು ಸೇವೆಗಳ ತ್ವರಿತ ಪ್ರತಿಕ್ರಿಯೆಗಾಗಿ ಮತ್ತು ಅವರಿಗೆ ನೀಡಲಾಗುತ್ತಿರುವ ವೈದ್ಯಕೀಯ ಆರೈಕೆಗಾಗಿ ನಾವು ಕೃತಜ್ಞರಾಗಿರುತ್ತೇವೆ" ಎಂದು ಅವರು ಹೇಳಿದ್ದಾರೆ
ಪಾಲ್ ಪೆಲೋಸಿರವರಿಗೆ 82 ವರ್ಷ ವಯಸ್ಸಾಗಿದ್ದು, ದಾಳಿಯ ಪರಿಣಾಮ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.