ಬ್ರೆಝಿಲ್‌ನ ನೂತನ ಅಧ್ಯಕ್ಷರಾಗಿ ಲೂಯಿಸ್ ಇನಾಸಿಯೊ ಲುಲಾ ಆಯ್ಕೆ

ಸಾವೊ ಪಾಲೊ: ಬ್ರೆಝಿಲ್‌ನ ಎಡಪಂಥೀಯ ಮಾಜಿ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ Brazil's Luis Inacio Lula da Silva ಅವರು ರವಿವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರನ್ನು ಸೋಲಿಸಿ ಮತ್ತೊಮ್ಮೆ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ.
ಈ ಫಲಿತಾಂಶವು ಮೂರು ವರ್ಷಗಳ ಹಿಂದೆ ಭ್ರಷ್ಟಾಚಾರಕ್ಕಾಗಿ ಜೈಲಿನಲ್ಲಿದ್ದ ಲುಲಾ ಅದ್ಭುತ ಪುನರಾಗಮನಕ್ಕೆ ಹಾಗೂ ದೇಶದಲ್ಲಿ ಬಲಪಂಥೀಯ ಸರಕಾರದ ಆಡಳಿತ ಅಂತ್ಯಕ್ಕೆ ಸಾಕ್ಷಿಯಾಯಿತು.
99.5 ಶೇ. ಮತಗಳನ್ನು ಎಣಿಕೆ ಮಾಡಿದ ಬಳಿಕ ಬೋಲ್ಸನಾರೊ 49.1 ಶೇ. ಮತ ಗಳಿಸಿದರೆ, ಲುಲಾ ಶೇ. 50.9 ಮತಗಳನ್ನು ಪಡೆದರು ಎಂದು ಚುನಾವಣಾ ಅಧಿಕಾರಿಗಳು ವರದಿ ಮಾಡಿದ್ದಾರೆ.
ಲುಲಾ ಅವರು 2003 ರಿಂದ 2010 ರವರೆಗೆ ಬ್ರೆಝಿಲ್ ಅಧ್ಯಕ್ಷರಾಗಿದ್ದರು.
ಬಡತನದಲ್ಲಿ ಜನಿಸಿದ ಮಾಜಿ ಯೂನಿಯನ್ ನಾಯಕ ಲುಲಾ 1970 ರ ದಶಕದಲ್ಲಿ ಬ್ರೆಝಿಲ್‌ನ ಮಿಲಿಟರಿ ಸರಕಾರದ ವಿರುದ್ಧ ಮುಷ್ಕರಗಳನ್ನು ಆಯೋಜಿಸಿದ್ದರು. 77ರ ವಯಸ್ಸಿನ ಲುಲಾ ಬ್ರೆಝಿಲ್‌ನ ಕಾರ್ಮಿಕ ವರ್ಗದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ.
ಮತದಾನವು ವಿದ್ಯುನ್ಮಾನವಾಗಿದ್ದು, ಮತದಾನ ಸಂಜೆ 5 ಗಂಟೆಗೆ ಮುಕ್ತಾಯಗೊಂಡ ಎರಡು ಗಂಟೆಗಳ ಒಳಗೆ ಫಲಿತಾಂಶಗಳನ್ನು ಪ್ರಕಟಿಸಲಾಯಿತು.
ಲುಲಾ ಜನವರಿ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.