ಇನ್ನು ಟ್ವಿಟರ್ ಬ್ಲೂ ಟಿಕ್‌ಗೆ ಶುಲ್ಕ ಪಾವತಿ ನಿಯಮ ಜಾರಿಗೆ?

ಹೊಸದಿಲ್ಲಿ: ಟ್ವಿಟರ್‌ನ (Twitter) ನೂತನ ಬಾಸ್ ಆಗಿರುವ ಎಲಾನ್ ಮಸ್ಕ್ (Elon Musk) ಅವರು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ವೆರಿಫಿಕೇಶನ್ ಅಥವಾ ದೃಢೀಕರಣ ಪ್ರಕ್ರಿಯೆಯನ್ನು ಬದಲಾಯಿಸುವುದಾಗಿ ಹೇಳಿದ್ದಾರೆ. ದೃಢೀಕೃತ ಟ್ವಿಟರ್ ಹ್ಯಾಂಡಲ್‌ಗಳಿಗೆ ನೀಲಿ ಟಿಕ್ ಇರುತ್ತದೆ.
ತಮ್ಮ ನೂತನ ಯೋಜನೆ ಕುರಿತು ಮಸ್ಕ್ ಟ್ವೀಟ್ ಮಾಡಿ, ತಮಗೆ ದೊಡ್ಡ ಸಂಖ್ಯೆಯ ಫಾಲೋವರ್ಸ್ ಇದ್ದರೂ ಬ್ಲೂ ಟಿಕ್ ನಿರಾಕರಿಸಲಾಗಿತ್ತು ಎಂದಿದ್ದಾರೆ. ಆದರೆ ಈಗ ಸಂಸ್ಥೆಯ ಬಾಸ್ ಆಗಿ ದೃಡೀಕರಣ ವ್ಯವಸ್ಥೆಯನ್ನು ಅವರು ಹೇಗೆ ಬದಲಾಯಿಸಲಿದ್ದಾರೆ ಎಂಬ ಪ್ರಶ್ನೆಯಿದೆ. ಕೆಲ ಮಾಧ್ಯಮ ವರದಿಗಳ ಪ್ರಕಾರ ಬ್ಲೂ ಟಿಕ್ ಪಡೆಯುವವರು ಮಾಸಿಕ ಒಂದಿಷ್ಟು ಶುಲ್ಕ ಪಾವತಿಸಬೇಕಾದ ಅಗತ್ಯವಿರಬಹುದು. ಅಷ್ಟೇ ಅಲ್ಲದೆ ಬ್ಲೂ ಟಿಕ್ ಕೇವಲ ಟ್ವಿಟರ್ ಬ್ಲೂ ಸದಸ್ಯರಿಗೆ ಇರಲಿದ್ದು ಟ್ವಿಟರ್‌ನ ಹೊಸ ಚಂದಾದಾರಿಕೆ ವ್ಯವಸ್ಥೆಯಲ್ಲಿ ಟ್ವೀಟ್‌ಗಳನ್ನು ಎಡಿಟ್ ಮತ್ತು ಅನ್‌ಡೂ ಅಥವಾ ರದ್ದುಮಾಡುವ ಅವಕಾಶವಿರಲಿದೆ ಎನ್ನಲಾಗಿದೆ.
ಬ್ಲೂ ಟಿಕ್ ಫೀ ಅನ್ನು ಕಂಪೆನಿಯು ಮಾಸಿಕ 19.99 ಡಾಲರ್ (ಅಂದಾಜು ರೂ. 1600) ಎಂದು ನಿಗದಿ ಪಡಿಸುವ ಸಾಧ್ಯತೆಯಿದೆಯೆನ್ನಲಾಗಿದೆ. ಈಗಾಗಲೇ ಬ್ಲೂ ಟಿಕ್ ಹೊಂದಿರುವವರು ಟ್ವಿಟರ್ ಬ್ಲೂ ಗೆ ಚಂದಾದಾರಿಕೆ ಪಡೆಯಲು ಹಾಗೂ ಬ್ಲೂ ಟಿಕ್ ಉಳಿಸಿಕೊಳ್ಳಲು 90 ದಿನಗಳ ಸಮಯಾವಕಾಶ ಪಡೆಯಲಿದ್ದಾರೆ.
ಟ್ವಿಟರ್ ಖಾತೆ ದೃಢೀಕರಣ ವ್ಯವಸ್ಥೆಯನ್ನು ಬದಲಾಯಿಸಲು ಸಂಸ್ಥೆಯ ಇಂಜಿನಿಯರ್‌ಗಳಿಗೆ ನವೆಂಬರ್ 7 ರ ಗಡುವು ವಿಧಿಸಲಾಗಿದೆಯೆನ್ನಲಾಗಿದ್ದು ಈ ಅವಧಿಯೊಳಗೆ ಕೆಲಸ ಪೂರ್ಣಗೊಳಿಸದೇ ಇದ್ದರೆ ಅವರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಎಚ್ಚರಿಕೆಯನ್ನೂ ಅವರಿಗೆ ನೀಡಲಾಗಿದೆ ಎನ್ನಲಾಗಿದೆ.