ಕಾರ್ಮಿಕರ ಶೋಷಣೆ ಸೋಲಿಸಲು ಸಂಘಟನೆ ಬಲವಾಗಲಿ: ದೇಬಸಿಶ್ ರಾಯ್
ಮಂಗಳೂರು: ಸಿಐಟಿಯು 10ನೇ ರಾಜ್ಯ ಸಮ್ಮೇಳನ ಉದ್ಘಾಟನೆ

ಮಂಗಳೂರು, ಅ.31: ಬೀಡಿ ಕಾರ್ಮಿಕರಿಗಾಗಿ ಹಿಂದೆ ಇದ್ದ ಫ್ಯಾಕ್ಟರಿ ಪದ್ಧತಿ ಮನೆಗಳಿಗೆ ಸೀಮಿತಗೊಂಡ ಬಳಿಕ ಶೋಷಣೆ ಹೆಚ್ಚಾಗಿದೆ. ಈ ಶೋಷಣೆ ಹೆಚ್ಚಿಸುವ ಪ್ರಯತ್ನ ಸೋಲಿಸಲು ಯೂನಿಯನ್ ಗಟ್ಟಿಗೊಳಿಸಬೇಕಾಗಿದೆ ಎಂದು ಆಲ್ ಇಂಡಿಯಾ ಬೀಡಿ ವರ್ಕರ್ಸ್ ಫೆಡೇರಶನ್ ಪ್ರಧಾನ ಕಾರ್ಯದರ್ಶಿ ದೇಬಸಿಶ್ ರಾಯ್ ಅಭಿಪ್ರಾಯಿಸಿದ್ದಾರೆ.
ನಗರದ ಡಾನ್ ಬಾಸ್ಕೋ ಸಭಾಂಗಣದ ಬಿ. ಮಾಧವ ವೇದಿಕೆಯಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು)ನ 10ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಪೂರ್ವದಿಂದಲೂ ದ.ಕ. ಜಿಲ್ಲೆಯನ್ನು ಒಳಗೊಂಡಂತೆ ಬೀಡಿ ಕಾರ್ಮಿಕರ ಚಳವಳಿ ಅತ್ಯಂತ ಪ್ರಬಲವಾಗಿದೆ. ಆದರೆ ಬೀಡಿ ಕಾರ್ಮಿಕರು ಇದೀಗ ಹಲವು ರೀತಿಯ ಸಮಸ್ಯೆ, ಶೋಷಣೆಗಳನ್ನು ಅನುಭವಿಸುತ್ತಿರುವ ಜತೆ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಯೂನಿಯನ್ ಮೂಲಕ ತಳ ಹಂತದಿಂದಲೇ ಸ್ಪಂದಿಸಬೇಕು ಎಂದು ಅವರು ಹೇಳಿದರು.
ಬೀಡಿ ಕಾರ್ಮಿಕರಿಗಾಗಿಯೇ ತೆರೆಯಲಾಗಿದ್ದ ಚಿಕಿತ್ಸಾಲಯಗಳು ಬಹಳಷ್ಟು ಸ್ಥಗಿತಗೊಂಡಿವೆ. ಬೀಡಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಆ್ಯಂಬುಲೆನ್ಸ್ ಸೇವೆಗಳೂ ಕಾರ್ಯನಿರ್ವಹಿಸುತ್ತಿಲ್ಲ. ಬೀಡಿ ಕಾರ್ಮಿಕರನ್ನು ಇಎಸ್‌ಐ ಸೌಲಭ್ಯದಡಿ ತರುವ ಕಾರ್ಯವೂ ಆಗುತ್ತಿಲ್ಲ. ಚಳವಳಿಗಳ ಮೂಲಕ ಗಳಿಸಿದ ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತಿರುವ ಸಂದರ್ಭ ಅದನ್ನು ಮತ್ತೆ ಗಳಿಸಲು ಚಳವಳಿಯನ್ನು ಬಲಿಷ್ಠಗೊಳಿಸುವ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಸಿಐಟಿಯು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಮುಜೀಬ್, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ದ.ಕ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸ್ವಾಗತ ಸಮಿತಿ ಕೋಶಾಧಿಕಾರಿ ಜಯಂತ ನಾಯ್ಕ್, ಎಐಟಿಯುಸಿ ಮುಖಂಡರಾದ ಯು.ಬಿ.ಲೋಕಯ್ಯ, ಸೀತಾರಾಂ ಬೇರಿಂಜ, ಸಿಐಟಿಯುನ ಕೃಷ್ಣಪ್ಪ ಸಾಲ್ಯಾನ್, ಯಾದವ ಶೆಟ್ಟಿ, ರಮಣಿ ಮೊದಲಾದವರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್‌ನ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ವಸಂತ ಆಚಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇಶವು ಹಸಿವಿನ ಸೂಚ್ಯಂಕದಲ್ಲಿ ನೆರೆಹೊರೆಯ ರಾಷ್ಟ್ರಗಳಿಗಿಂತಲೂ ಕೆಳಮಟ್ಟದಲ್ಲಿದೆ. ಆದರೆ ಸರಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬದಲಾಗಿ ಸಂವಿಧಾನದ ಬಹುತ್ವದಿಂದ ಏಕತೆಯ ಆಶಯವನ್ನು ಒಡೆಯುವ ಕೆಲಸದಲ್ಲಿ ನಿರತವಾಗಿವೆ. ಇದು ಆರೆಸ್ಸೆಸ್‌ನ ಹಿಂದಿನ ಅಜೆಂಡವಾಗಿದೆ. ಅದನ್ನೇ ಮುಂದುವರಿಸಿರುವ ಸರಕಾರ ಹಿಂದಿ, ಹಿಂದು, ಹಿಂದೂಸ್ತಾನ್ ಎಂಬ ಹೆಸರಿನಲ್ಲಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಭಾಷೆಯಿಂದ ವ್ಯವಹಾರಕ್ಕೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಆದರೆ ಸರಕಾರ ಹಿಂದಿ ಭಾಷೆಯ ಹೇರಿಕೆಯ ಮೂಲಕ ಹಿಂದಿಯೇತರ ರಾಜ್ಯಗಳಲ್ಲಿನ ಸ್ಥಳೀಯ ಭಾಷೆಗಳನ್ನು ಕೊಲ್ಲಲು ಹೊರಟಿದೆ. ಕಾರ್ಮಿಕರ, ಬಡವರ ನೈಜ ಹೋರಾಟಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಈ ಕುತಂತ್ರವನ್ನು ಅರಿಯಬೇಕಾಗಿದೆ.
-ದೇಬಸಿಶ್ ರಾಯ್, ಪ್ರಧಾನ ಕಾರ್ಯದರ್ಶಿ, ಆಲ್ ಇಂಡಿಯಾ ಬೀಡಿ ವರ್ಕರ್ಸ್ ಫೆಡರೇಶನ್