ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಿದ್ದೀಕ್ ಕಪ್ಪನ್‌ಗೆ ಜಾಮೀನು ನಿರಾಕರಿಸಿದ ಲಕ್ನೋ ಸೆಷನ್ಸ್ ನ್ಯಾಯಾಲಯ
ಯುಎಪಿಎ ಪ್ರಕರಣದಲ್ಲಿ ಜಾಮೀನು ದೊರೆತರೂ ಸಿಕ್ಕಿಲ್ಲ ಬಿಡುಗಡೆ ಭಾಗ್ಯ

ಲಕ್ನೋ: ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಲಕ್ನೋ ಸೆಷನ್ಸ್ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಅಕ್ಟೋಬರ್ 12 ರಂದು ಪ್ರಕರಣದ ವಿಚಾರಣೆ ಮುಗಿದ ನಂತರ ಜಿಲ್ಲಾ ನ್ಯಾಯಾಧೀಶ ಸಂಜಯ್ ಶಂಕರ್ ಪಾಂಡೆ ಅವರು ಸಿದ್ದೀಕ್ ಕಪ್ಪನ್ ಅವರ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದರು.
ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದರಿಂದ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 (ಯುಎಪಿಎ) ಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ ಸಿದ್ದೀಕ್ ಕಪ್ಪನ್ ಜೈಲಿನಲ್ಲೇ ಇರುತ್ತಾರೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2022ರ ಸೆಪ್ಟೆಂಬರ್ 9ರಂದು ಕಪ್ಪನ್‌ಗೆ ಜಾಮೀನು ನೀಡಿತ್ತು.
ಮಲಯಾಳಂ ಸುದ್ದಿ ಪೋರ್ಟಲ್‌ನ ವರದಿಗಾರ ಮತ್ತು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ಕೆಯುಡಬ್ಲ್ಯುಜೆ) ದಿಲ್ಲಿ ಘಟಕದ ಕಾರ್ಯದರ್ಶಿಯಾಗಿರುವ ಕಪ್ಪನ್ ಅವರನ್ನು ಯುಎಪಿಎ ಅಡಿಯಲ್ಲಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 6, 2020 ರಿಂದ ಯುಪಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಜಾತಿ ಗಲಭೆಗಳನ್ನು ಪ್ರಚೋದಿಸಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡಲು ಸಂಚು ರೂಪಿಸಿದ ಆರೋಪದ ಮೇಲೆ ಐಪಿಸಿಯ 120 ಬಿ, 153 ಎ/295 ಎ, ಐಟಿ ಕಾಯ್ದೆಯಡಿ ಅವರನ್ನು ಬಂಧಿಸಲಾಗಿತ್ತು.







