ದಲಿತರ ಯೋಜನೆಗಳನ್ನು ಕಸಿಯುವ ಧೋರಣೆ ಸರಿಯಲ್ಲ: ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಆಕ್ಷೇಪ

ಬೆಂಗಳೂರು, ಅ. 31: ‘ದಲಿತರಿಗಾಗಿ ರೂಪಿಸಲಾದ ವಿವಿಧ ಯೋಜನೆಗಳ ಜಾರಿ ವಿಷಯದಲ್ಲಿ ಸರಕಾರ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುವ ಧೋರಣೆಯನ್ನು ಹೊಂದಿದೆ’ ಎಂದು ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಕರ್ನಾಟಕ ದಲಿತ ಉದ್ದಿಮೆದಾರರ ಸಂಘವು ಆಯೋಜಿಸಿದ್ದ ‘ಮಾಧ್ಯಮ ಮಿತ್ರರೊಡನೆ ದಲಿತ ಉದ್ದಿಮೆದಾರರ ಸಮಾಲೋಚನಾ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಎಲ್ಲೆಡೆ ದಲಿತರಿಗೆ ಅವಕಾಶಗಳೇ ಸಿಗದಂತಾಗಿದ್ದು, ಮಾಧ್ಯಮವೂ ಸೇರಿದಂತೆ ಶೇ.99ರಷ್ಟು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಹುದ್ದೆಗಳಿಂದ ದಲಿತ ಸಮುದಾಯದವರನ್ನು ದೂರು ಇಡಲಾಗಿದೆ. ಇದನ್ನು ಪ್ರಶ್ನಿಸಬೇಕಾದ ಮಾಧ್ಯಮವು ಸರಕಾರದ ಜಾಹೀರಾತಿಗೆ ಜೋತು ಬಿದ್ದಿದೆ ಎಂದು ಟೀಕಿಸಿದರು.
‘ಆರಂಭದಲ್ಲಿ 192 ಎಕರೆ ಭೂಮಿ ದಲಿತ ಉದ್ಯಮಿಗಳಿಗೆ ಸಿಮೀತವಾಗಿದ್ದು, ಇದೀಗ 1ಸಾವಿರ ಎಕರೆಗೆ ತಲುಪಿದೆ. ಉದ್ಯಮಿಗಳ ಸಂಖ್ಯೆ ಸಾವಿರ ಮೀರಿದೆ. ಆದರೆ ಅರ್ಧ, ಕಾಲು ಎಕರೆ ಭೂಮಿಯನ್ನು ಹೊಂದಿದ್ದಾರೆ. ಒಂದು ಎಕರೆ ಹೊಂದಿದವರು ತುಂಬ ಕಡಿಮೆ ಇದ್ದಾರೆ. ದಲಿತರು ಕೇವಲ ಕೆಲಸಗಾರ ಆಗುವುದು ಮಾತ್ರವಲ್ಲ, ಕೆಲಸ ನೀಡುವವರೂ ಆಗಬೇಕು. ಒಗಟ್ಟಿನಿಂದ ಇದು ಸಾಧ್ಯವಿದ್ದು, ಪರಿಣತ ಕ್ಷೇತ್ರದಲ್ಲಿ ಉದ್ಯಮಿಯಾಗಲು ಮುಂದಾಗಬೇಕು ಎಂದರು.
ಪತ್ರಕರ್ತ ರವೀಂದ್ರ ಭಟ್ ಮಾತನಾಡಿ, ಒಬ್ಬ ದಲಿತ ಉದ್ಯಮಿಯಾದರೆ ಒಂದು ಜನಾಂಗ ಉದ್ಧಾರ ಆಗುತ್ತದೆ. ಅದಕ್ಕಾಗಿ ದಲಿತರು ಉದ್ಯಮ ಕ್ಷೇತ್ರದಲ್ಲಿ ಬೆಳೆಯುವ ಅಗತ್ಯವಿದೆ ಎಂದರು.
ಪತ್ರಕರ್ತ ಸುದರ್ಶನ ಚನ್ನಂಗಿಹಳ್ಳಿ ಮಾತನಾಡಿ, ದಲಿತರು ಹೋರಾಟದ ಮೂಲಕ ಮೇಲೆ ಬಂದವರು. ರಾಜ್ಯದಲ್ಲಿ ಪ್ರಸ್ತುತ 3500 ದಲಿತ ಉದ್ಯಮಿಗಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿ. ಉದ್ಯಮ ಆರಂಭ ಸೇರಿದಂತೆ ಎಲ್ಲಾ ಹಂತದಲ್ಲಿ ಈ ಸಂಘ ನೆರವಿಗೆ ನಿಲ್ಲುತ್ತದೆ. ಯುವಕರು ಮುಂದೆ ಬರಲಿ ಎಂದು ಆಶಿಸಿದರು.
ಪತ್ರಕರ್ತ ಹುಣಸವಾಡಿ ರಾಜನ್ ಮಾತನಾಡಿ, ಮಾಧ್ಯಮದ ಮಂದಿ ಸರ್ವಜ್ಞರಲ್ಲ. ಆದರೆ, ದಲಿತರ ಸಮಸ್ಯೆಗಳು ನಮ್ಮ ಕಿವಿಗೆ ಬಿದ್ದಾಗ ಸರಕಾರದ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಷ್ಟೇ ನಮ್ಮ ಜವಾಬ್ದಾರಿಯಾಗಿರುತ್ತದೆ. ಜೊತೆಗೆ ದಲಿತರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅನಿವಾರ್ಯ ಎಂದರು.
ಪತ್ರಕರ್ತರಾದ ರಮಾಕಾಂತ್ ಆರ್ಯನ್, ಎಲ್.ಎಂ.ನಾಗರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
‘ಸರಕಾರ ದಲಿತರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೆ, ಅವುಗಳನ್ನು ಸಮರ್ಪಕವಾಗಿ ಜಾರಿ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆದುದರಿಂದ ದಲಿತರು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳು ಮಾಧ್ಯಮದವರ ಮೂಲಕ ಆಳುವ ಸರಕಾರಕ್ಕೆ ತಿಳಿಸುವುದು ಅನಿವಾರ್ಯ. ಪ್ರತಿ ಜಿಲ್ಲೆಯಿಂದ 15 ಜನರಂತೆ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈ ಸರಕಾರ ಈಗಲಾದರು ನಮ್ಮ ಉದ್ದಿಮೆದಾರರ ಸಮಸ್ಯೆಗಳನ್ನು ಪರಿಹಾರ ಮಾಡುವ ನಂಬಿಕೆಯಲ್ಲಿದ್ದೇವೆ’
-ಸಿ.ಜಿ.ಶ್ರೀನಿವಾಸ್, ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ







