ಪಶ್ಚಿಮಬಂಗಾಳ: ಮಾಲ್ ನಲ್ಲಿ ಚಾಕ್ಲೇಟ್ ಕದ್ದ ವೀಡಿಯೊ ವೈರಲ್: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಅಲಿಪುರದ್ವಾರ,ಅ.31: ಶಾಪಿಂಗ್ ಮಾಲ್‌ನಲ್ಲಿ ತಾನು ಚಾಕ್ಲೇಟ್ ಕದಿಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಕಾಲೇಜು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಪ.ಬಂಗಾಳದ ಅಲಿಪುರದ್ವಾರ ಜಿಲ್ಲೆಯ ಜೈಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ಸಂಭವಿಸಿದೆ.
ಮೂರನೇ ವರ್ಷದ ಪದವಿ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸುಭಾಷ ಪಲ್ಲಿಯಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದಾಳೆ.
ತನ್ನ ಮಗಳು ಸೆ.29ರಂದು ತನ್ನ ಸೋದರಿಯೊಂದಿಗೆ ಶಾಪಿಂಗ್ ಮಾಲ್‌ಗೆ ತೆರಳಿದ್ದು,ಅಲ್ಲಿಂದ ಹೊರಬೀಳುವಾಗ ಆಕೆಯನ್ನು ತಡೆದಿದ್ದ ಸಿಬ್ಬಂದಿಗಳು ಚಾಕ್ಲೇಟ್‌ಗಳನ್ನು ಕದ್ದಿರುವುದಾಗಿ ಆರೋಪಿಸಿದ್ದರು. ಆಕೆ ಚಾಕ್ಲೇಟ್‌ಗಳ ಹಣವನ್ನು ಪಾವತಿಸಿ ಮಾಲ್‌ನ ಅಧಿಕಾರಿಗಳ ಬಳಿ ಕ್ಷಮೆ ಯಾಚಿಸಿದ್ದಳು ಎಂದು ವಿದ್ಯಾರ್ಥಿನಿಯ ತಂದೆ ತಿಳಿಸಿದರು.
ಆದರೆ ಮಾಲ್‌ನಲ್ಲಿದ್ದ ಕೆಲವರು ಇಡೀ ಘಟನೆಯ ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು,ಅದು ವೈರಲ್ ಆಗಿತ್ತು. ಅವಮಾನವನ್ನು ಸಹಿಸದೆ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರು.
ಮಾಲ್‌ನ ಹೊರಗೆ ಪ್ರತಿಭಟನೆ ನಡೆಸಿದ ಸ್ಥಳೀಯರು ವೀಡಿಯೊ ಮಾಡಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







