ಜಾನಪದ ತಜ್ಞ ಡಾ.ಕೆ.ಚಿನ್ನಪ್ಪ ಗೌಡರಿಗೆ ಪೊಳಲಿ-ಎಸ್.ಆರ್. ಹೆಗ್ಡೆ ಪ್ರಶಸ್ತಿ

ಉಡುಪಿ: ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ತುಳು, ಕನ್ನಡ ಜಾನಪದ ತಜ್ಞ ಡಾ. ಕೆ. ಚಿನ್ನಪ್ಪ ಗೌಡ ಅವರು 2022ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್. ಆರ್. ಹೆಗ್ಡೆ ಹೆಸರಿನಲ್ಲಿ ಜಂಟಿಯಾಗಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 20,000ರೂ. ನಗದು ಹಾಗೂ ಪ್ರಶಸ್ತಿ ಫಲಕ ವನ್ನೊಳಗೊಂಡಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ತಾಲೂಕಿನ ಕೂಡೂರು ಎಂಬಲ್ಲಿ ಜನಿಸಿದ ಕೆ. ಚಿನ್ನಪ್ಪ ಗೌಡರು ಮದರಾಸು ವಿಶ್ವದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಹಾಗೂ ಮಂಗಳೂರು ವಿವಿಯಲ್ಲಿ ಡಾ.ಬಿ.ಎ.ವಿವೇಕ ರೈ ಮಾರ್ಗದರ್ಶನದಲ್ಲಿ ‘ಭೂತಾರಾಧನೆ-ಜಾನಪದೀಯ ಅಧ್ಯಯನ’ ಎಂಬ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಉಜಿರೆಯ ಎಸ್‌ಡಿಎಂ ಪದವಿ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿ ಮುಂದೆ ಮಂಗಳೂರು ವಿವಿಯ ಎಸ್‌ವಿಪಿ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಮಂಗಳೂರು ವಿವಿಯಲ್ಲಿ ಕುಲಸಚಿವರಾಗಿ, ಕಲಾನಿಕಾಯದ ಡೀನ್, ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೇ ಡಾ.ಚಿನ್ನಪ್ಪ ಗೌಡರು ಹಾವೇರಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ, ತುಳುವ ಮೌಖಿಕ ಕಥನ ಮತ್ತು ಸಂಸ್ಕೃತಿ ಹಾಗೂ ಜಾನಪದ ಅಧ್ಯಯನದ ಕುರಿತು ವಿಶೇಷ ಪರಿಣತಿ ಹೊಂದಿದ್ದಾರೆ. ಇವರು ಪಿಎಚ್‌ಡಿ ಹಾಗೂ ಎಂ.ಫಿಲ್ ವಿದ್ಯಾರ್ಥಿಗಳ ಮಾರ್ಗದರ್ಶಕರೂ ಆಗಿ ಸೇವೆ ಸಲ್ಲಿಸಿದ್ದಾರೆ.
ಇವರು ಫಿನ್ಲೆಂಡಿನ ಪೋಸ್ಟ್ ಡಾಕ್ಟರಲ್ ಫೆಲೋಶಿಪ್, ಜಪಾನಿನ-ಜಪಾನ್ ಫೌಂಡೇಶನ್ ಫೆಲೊಶಿಪ್ ಪಡೆದಿದ್ದಾರೆ. ಟರ್ಕಿ, ಫಿನ್ಲೆಂಡ್‌ನ ತ್ಯುಂಬಿಗನ್ ವಿವಿ ಹಾಗೂ ಜರ್ಮನಿಯ ಊರ್ಝ್‌ಬರ್ಗ್‌ನ ಮ್ಯಾಕ್ಸ್‌ಮಿಲ್ಲನ್ಸ್ ವಿವಿ ಮುಂತಾದ ಕಡೆ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
‘ಭೂತಾರಾಧನೆ ಕೆಲವು ಅಧ್ಯಯನಗಳು’, ‘ಭೂತಾರಾಧನೆ’ ‘ಜಾಲಾಟ’, ‘ಸಂಸ್ಕೃತಿ ಸಿರಿ’, ‘ಗೌಡಸಂಸ್ಕೃತಿ ಮತ್ತು ಆಚರಣೆಗಳು’, ‘ಸೇರಿಗೆ’, ’ರತ್ನಮಾನಸ’ ಸೇರಿದಂತೆ 20ಕ್ಕೂ ಅಧಿಕ ಪುಸ್ತಕಗಳನ್ನು ರಚಿಸಿದ್ದಾರೆ.







