ಕನ್ನಡ ಬಾವುಟ: ಭಾವುಕತೆಯೋ, ಬದುಕಿನ ಪ್ರಶ್ನೆಯೋ?

ಕನ್ನಡದ ಕುರಿತ ಕಾಳಜಿಯೊ ಕನ್ನಡವು ಅನ್ನದ ಭಾಷೆಯಾಗಬೇಕೆಂಬ ಪ್ರಶ್ನೆಯೋ? ಇದು ಇವತ್ತಿನ ಬಹುದೊಡ್ಡ ದ್ವಂದ್ವವಾಗಿದೆ. ಕನ್ನಡವು ಅನ್ನದ ಭಾಷೆಯಾಗಬೇಕೆಂಬುದು ಮತ್ತೆ ಮತ್ತೆ ಕೇಳಿಬರುತ್ತಿರುವ ದೊಡ್ಡ ಮಾತಾಗುತ್ತ, ವಾಸ್ತವ ಅದಕ್ಕಿಂತ ಬೇರೆಯೇ ಇರುವ ತಳಮಳವು ಇಂದು ಕನ್ನಡ ಕುರಿತ ಕಳಕಳಿಯನ್ನು ಕಾಡುವ ಸಂಗತಿಯಾಗಿದೆ. ಕನ್ನಡದ ಎದುರಿನ, ಕನ್ನಡಿಗರ ಎದುರಿನ ಈ ಬಗೆಹರಿಯದಂತಿರುವ ವಾಸ್ತವದ ನಡುವೆಯೇ ಮನೆಮನೆಯಲ್ಲೂ ಬಾವುಟ, ಕೋಟಿ ಕಂಠ ಗಾಯನ ಮುಂತಾದ ಮಾತುಗಳು ಅತಿ ಮಧುರವಾಗಿ ಆವರಿಸುತ್ತಲೇ ಇರುವುದೂ ಅಷ್ಟೇ ಚೋದ್ಯ.
ಕನ್ನಡ ಬಾವುಟದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ರಾಜ್ಯೋತ್ಸವವನ್ನು ಸಂಭ್ರಮಿಸಲು ಮನೆಮನೆಗಳಲ್ಲಿ ಕನ್ನಡ ಧ್ವಜ ಹಾರಾಟ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಸಂಘಟನೆಗಳು ಇದನ್ನೊಂದು ಅಭಿಯಾನದ ರೂಪದಲ್ಲಿ ತೆಗೆದುಕೊಂಡಿತು. ಕನ್ನಡ ಬಾವುಟ ಕನ್ನಡ ನುಡಿಯ ಬಗೆಗಿನ ಅಭಿಮಾನದ ಭಾಗವಾಗಿ ಭಾವನಾತ್ಮಕ ಮಹತ್ವ ಪಡೆದಿದೆ. ಹಳದಿ ಮತ್ತು ಕೆಂಪು ಬಣ್ಣದ ಈ ಧ್ವಜವನ್ನು 1965ರಲ್ಲಿ ಮ. ರಾಮಮೂರ್ತಿಯವರು ಕಟ್ಟಿದ ಕನ್ನಡ ಪಕ್ಷದ ಅಧಿಕೃತ ಬಾವುಟವಾಗಿ ರೂಪಿಸಲಾಯಿತು. ಅದನ್ನೇ ಬಳಿಕ ಕನ್ನಡ ಮತ್ತು ಕರ್ನಾಟಕವನ್ನು ಪ್ರತಿನಿಧಿಸಲು ಬಳಸುವುದು ರೂಢಿಗೆ ಬಂತು. ಗೋಕಾಕ್ ಚಳವಳಿ ಸೇರಿದಂತೆ ಕನ್ನಡ ಹೋರಾಟಗಳು ಮತ್ತು ಕನ್ನಡ ಉತ್ಸವಗಳಲ್ಲಿ ಈ ಧ್ವಜವನ್ನು ಬಳಸಲಾಗುತ್ತದೆ. ಕರ್ನಾಟಕ ರಾಜ್ಯೋತ್ಸವದಲ್ಲಿಯೂ ಈ ಧ್ವಜವನ್ನು ಹಾರಿಸಿ ಸಂಭ್ರಮಿಸಲಾಗುತ್ತದೆ. ಕನ್ನಡ ಪಕ್ಷದ ಈ ಅಧಿಕೃತ ಬಾವುಟಕ್ಕೂ ಮೊದಲು ಮತ್ತೊಂದು ಬಗೆಯ ಧ್ವಜವಿತ್ತಾದರೂ ಅದು ಹೆಚ್ಚು ಕಾಲ ಉಳಿಯಲಿಲ್ಲ. ಈ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನು ಕನ್ನಡದ ಅಧಿಕೃತ ಧ್ವಜವಾಗಿ ಘೋಷಿಸಬೇಕೆಂಬ ಒತ್ತಾಯವೂ ಬಹುಕಾಲದ್ದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂಥದೊಂದು ಒತ್ತಾಯವನ್ನು ಸಕಾರದ ಮುಂದಿಟ್ಟಿತು. ಆದರೆ ಪಕ್ಷವೊಂದರ ಅಧಿಕೃತ ಧ್ವಜವಾಗಿ ಚುನಾವಣಾ ಆಯೋಗವೇ ಮಾನ್ಯ ಮಾಡಿರುವ ಈ ಧ್ವಜವನ್ನು ನಾಡಧ್ವಜವಾಗಿ ಘೋಷಿಸಲು ತಾಂತ್ರಿಕ ಅಡಚಣೆಗಳಿದ್ದ ಹಿನ್ನೆಲೆಯಲ್ಲಿ ಕನ್ನಡ ಧ್ವಜ ವಿನ್ಯಾಸಕ್ಕೆ ಒಂದು ಸಮಿತಿಯು ರಚನೆಯಾಗಿ, ಅದು ತನ್ನ ವರದಿಯನ್ನು ಸಲ್ಲಿಸಿದ್ದೂ ಆಯಿತು. ಅದನ್ನು ಯಥಾವತ್ತಾಗಿ ಸ್ವೀಕರಿಸಿದ್ದ ಸರಕಾರ ಕೇಂದ್ರಕ್ಕೆ ಆ ಶಿಫಾರಸುಗಳನ್ನು ಕಳಿಸಿತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ದೊಡ್ಡ ಚರ್ಚೆಯೇ ನಡೆದಿತ್ತು. ರಾಷ್ಟ್ರದ ಏಕತೆಯ ಪ್ರಶ್ನೆಯೆಂದೆಲ್ಲ ಮಾಧ್ಯಮಗಳೂ ಅಬ್ಬರಿಸಿ ಮಾತನಾಡಿದ್ದವು. ರಾಷ್ಟ್ರಧ್ವಜ ಸಾಲದೆ, ಕನ್ನಡಕ್ಕೆ ಮತ್ತೊಂದು ಧ್ವಜದ ಅಗತ್ಯವೇನಿದೆ ಎಂಬುದನ್ನು ರಾಜ್ಯ ಬಿಜೆಪಿ ನಾಯಕರೆೇ ಎತ್ತಿದ್ದರು. ಇದಕ್ಕೆಲ್ಲ ಆಗಿನ ಮುಖ್ಯಂತ್ರಿ ಸಿದ್ದರಾಮಯ್ಯ ಉತ್ತರಿಸಿ, ಕನ್ನಡಿಗರು ತಮ್ಮ ಭಾಷೆಗೆ ಪ್ರಾಧ್ಯಾನ್ಯತೆ ಕೊಟ್ಟು ತಮ್ಮದೇ ಭಾಷೆಯನ್ನು ಹೊಂದುವುದು, ತಮ್ಮ ನಾಡಿನ ಅಸ್ಮಿತೆಯನ್ನು ಈ ಮೂಲಕ ವ್ಯಕ್ತಗೊಳಿಸುವುದು ರಾಷ್ಟ್ರದ ಏಕತೆಗೆ ತೊಡಕಾಗುವುದಿಲ್ಲ ಎಂದು ಹೇಳಿದ್ದರು.
ಪ್ರಾದೇಶಿಕ ಅನನ್ಯತೆಯನ್ನು ಅಪೇಕ್ಷಿಸುವುದು ದೇಶಕ್ಕೆ ಮಾರಕವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು. ರಾಷ್ಟ್ರಕ್ಕೊಂದೇ ಧ್ವಜ ಎಂಬ ವಾದದ ಹಿನ್ನೆಲೆಯಲ್ಲಿ ಕನ್ನಡ ನಾಡಧ್ವಜದ ಪ್ರಶ್ನೆ ಹಿಂದೆ ಸರಿದಿರುವುದರ ವಿಚಾರ ಏನೇ ಇದ್ದರೂ, ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ಇಲ್ಲವಾಗಿದ್ದರೂ, ಕನ್ನಡ ಜನಮಾನಸದಲ್ಲಿ ಮ. ರಾಮಮೂರ್ತಿಯವರು ರೂಪಿಸಿಹೋಗಿರುವ ಹಳದಿ, ಕೆಂಪು ಬಣ್ಣದ ಧ್ವಜ ಕನ್ನಡದ ಸಂಕೇತದಂತೆ ಉಳಿದಿರುವುದು ಸುಳ್ಲಲ್ಲ. ಹೀಗಾಗಿಯೇ, ಕನ್ನಡ ರಾಜ್ಯೋತ್ಸವದ ವೇಳೆ ಮನೆಮನೆಯಲ್ಲಿ ಕನ್ನಡ ಬಾವುಟ ಹಾರಿಸುವ ವಿಚಾರಕ್ಕೆ ಭಾವನಾತ್ಮಕ ಮಹತ್ವ ಪ್ರಾಪ್ತವಾಗಿರುವುದು. ರಾಜಕೀಯವಾಗಿಯೂ ಈ ಭಾವನಾತ್ಮಕ ವಿಚಾರವನ್ನು ಬಳಸಿಕೊಳ್ಳುವ ಇಂಗಿತಗಳು ಜಾಗ್ರತವಾಗಿಟ್ಟಿರುವುದು. ಇನ್ನೊಂದು ಬೆಳವಣಿಗೆಯನ್ನು ಗಮನಿಸಬೇಕು. ಸ್ಟಾಫ್ ಸೆಲೆಕ್ಷನ್ ಕಮಿಷನ್ 2023ರ ಜನವರಿಯಲ್ಲಿ ಕಾನ್‌ಸ್ಟೇಬಲ್ ಹುದ್ದೆಗಳಿಗಾಗಿ ನಡೆಸಲಿರುವ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಕಡ್ಡಾಯವಾಗಿದ್ದು, ಕನ್ನಡವನ್ನು ಕಡೆಗಣಿಸಲಾಗಿದೆ.
ಗಡಿ ಭದ್ರತಾ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಇಂಡೋ ಟಿಬೇಟಿಯನ್ ಗಡಿ ಪೊಲೀಸ್, ಸಶಸ್ತ್ರ ಸೀಮಾ ಬಲ, ಸಚಿವಾಲಯ ಭದ್ರತಾ ಪಡೆ, ಅಸ್ಸಾಂ ರೈಫಲ್ಸ್, ಮಾದಕ ದ್ರವ್ಯ ನಿಯಂತ್ರಣ ದಳದಲ್ಲಿನ ಕಾನ್‌ಸ್ಟೆಬಲ್ ಹುದ್ದೆಗಳಿಗೆ ನಡೆಯಲಿರುವ ಈ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಉತ್ತರಿಸಲು ಅವಕಾಶವಿರುತ್ತದೆ. ಪ್ರಾದೇಶಿಕತೆಯನ್ನು ಕಡೆಗಣಿಸಿರುವ ಕೇಂದ್ರದ ಈ ಧೋರಣೆಗೆ ಕನ್ನಡ ಸಂಘಟನೆಗಳಿಂದ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ. ಕನ್ನಡ ಬಾವುಟವನ್ನು ಮನೆಮನೆಗಳಲ್ಲಿ ಹಾರಿಸುವ ಅಭಿಮಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಎಚ್.ಡಿ. ಕುಮಾರಸ್ವಾಮಿಯವರು ಕೂಡ ಇದನ್ನು ಖಂಡಿಸಿದ್ದು, ಕೇಂದ್ರದ ಬಿಜೆಪಿ ಸರಕಾರಕ್ಕೆ ಕನ್ನಡದ ಕತ್ತು ಹಿಸುಕುವುದೇ ಕೆಲಸ ಎಂದು ಟೀಕಿಸಿದ್ದಾರೆ. ಬಾವುಟದ ವಿಚಾರದಲ್ಲಿನ ಭಾವುಕತೆ ಮತ್ತು ಕೇಂದ್ರದ ಉದ್ಯೋಗಗಳಿಂದ ಕನ್ನಡಿಗರನ್ನು ದೂರವಿಡುವ ಹುನ್ನಾರಗಳ ಹೊತ್ತಿನ ಆತಂಕ ಇಂಥ ಸಂಘರ್ಷವು ಮತ್ತೆ ಮತ್ತೆ ಕನ್ನಡಿಗರಿಗೆ ಎದುರಾಗುತ್ತಲೇ ಇರುವಂಥದ್ದು.
ಈ ದೇಶದ ಇವತ್ತಿನ ರಾಜಕಾರಣಕ್ಕೆ ಭಾವನಾತ್ಮಕ ವಿಚಾರಗಳನ್ನು ಮುಂದೆ ಮಾಡಿ, ವಾಸ್ತವದ ಕಠೋರತೆಯನ್ನು ಮರೆಮಾಚುವುದು ಬಹು ಸುಲಭವೇ ಆಗಿದೆ. ಗಡಿಭಾಗದಲ್ಲಿನ ಜಗಳಗಳನ್ನು, ನೀರಿನ ವ್ಯಾಜ್ಯಗಳನ್ನು ಜೀವಂತವಾಗಿರಿಸಿಕೊಂಡೇ ಬರಲಾಗುತ್ತಿರುವುದರ ಹಿಂದಿನ ರಾಜಕಾರಣವೂ ಜನರ ಭಾವನೆಗಳನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ಉದ್ದೇಶದ್ದೇ. ಕನ್ನಡದ ವಿಚಾರದಲ್ಲಿನ ರಾಜಕಾರಣಕ್ಕೆ ಇಂಥದೇ ಹಲವು ಮುಖಗಳಿದ್ದು, ಭಾವುಕತೆಯಿಂದಾಗಿ ಅವಕಾಶ ವಂಚಿತರಾಗುತ್ತಿರುವವರ ಸಂಖ್ಯೆ ಸಣ್ಣದಲ್ಲ.
ಕನ್ನಡದ ಅಳಿವು ಉಳಿವಿನ ವಿಚಾರವೆಂಬುದು ಒಂದು ಪ್ರಶ್ನೆಯಾದರೆ, ಕನ್ನಡಿಗನ ಅನ್ನದ ಪ್ರಶ್ನೆಯೂ ಮತ್ತೊಂದೆಡೆಗೆ ಬೃಹದಾಕಾರದಲ್ಲಿ ಕಾಡುತ್ತಿದೆ. ಕನ್ನಡ ಮಾಧ್ಯಮವು ಒಂದು ಬಗೆಯ ತೊಡಕನ್ನು ಎದುರಿಸುತ್ತಿರುವಾಗ, ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವಾಗ, ಸರಕಾರಗಳ ಕನ್ನಡಪರ ಹೆಜ್ಜೆಯೆಂಬುದು ಭಾವುಕತೆ ತುಂಬಿದ ಭ್ರಾಮಕ ಝಗಮಗಕ್ಕೇ ಒತ್ತುಕೊಡುತ್ತಿರುವಾಗ, ಕನ್ನಡಿಗರು ಉದ್ಯೋಗಾವಕಾಶಗಳನ್ನು ಪಡೆಯಲಾರದ ಸನ್ನಿವೇಶವೂ ನಿಮಾಣವಾಗುತ್ತಿರುವುದು ಕನ್ನಡದ ಎದುರಿನ ತಲ್ಲಣವೇ ಆಗಿದೆ. ಕನ್ನಡದ ಕುರಿತ ಕಾಳಜಿಯೊ ಕನ್ನಡವು ಅನ್ನದ ಭಾಷೆಯಾಗಬೇಕೆಂಬ ಪ್ರಶ್ನೆಯೊ? ಇದು ಇವತ್ತಿನ ಬಹುದೊಡ್ಡ ದ್ವಂದ್ವವಾಗಿದೆ. ಕನ್ನಡವು ಅನ್ನದ ಭಾಷೆಯಾಗಬೇಕೆಂಬುದು ಮತ್ತೆ ಮತ್ತೆ ಕೇಳಿಬರುತ್ತಿರುವ ದೊಡ್ಡ ಮಾತಾಗುತ್ತ, ವಾಸ್ತವ ಅದಕ್ಕಿಂತ ಬೇರೆಯೇ ಇರುವ ತಳಮಳವು ಇಂದು ಕನ್ನಡ ಕುರಿತ ಕಳಕಳಿಯನ್ನು ಕಾಡುವ ಸಂಗತಿಯಾಗಿದೆ. ಕನ್ನಡದ ಎದುರಿನ, ಕನ್ನಡಿಗರ ಎದುರಿನ ಈ ಬಗೆಹರಿಯದಂತಿರುವ ವಾಸ್ತವದ ನಡುವೆಯೇ ಮನೆಮನೆಯಲ್ಲೂ ಬಾವುಟ, ಕೋಟಿ ಕಂಠ ಗಾಯನ ಮುಂತಾದ ಮಾತುಗಳು ಅತಿ ಮಧುರವಾಗಿ ಆವರಿಸುತ್ತಲೇ ಇರುವುದೂ ಅಷ್ಟೇ ಚೋದ್ಯ.
ಜೆ.ಎಚ್. ಪಟೇಲರಂಥ ನಾಯಕರು ಇಲ್ಲದ ಈ ಕಾಲದಲ್ಲಿ ಸಂಸತ್ತಿನಲ್ಲಿ ಕನ್ನಡವನ್ನು ತನ್ನ ಭಾಷೆಯೆಂದು ಮಾತನಾಡಬಲ್ಲ ಒಬ್ಬನೇ ಒಬ್ಬ ಕನ್ನಡ ಸಂಸದನಿಲ್ಲ. ಗಡಿ ವ್ಯಾಜ್ಯ, ಜಲವ್ಯಾಜ್ಯಗಳನ್ನು ಬಳಸಿಕೊಳ್ಳುವಂತೆ ಕನ್ನಡದ ಎದುರಿನ ಆತಂಕಗಳನ್ನು ರಾಜಕಾರಣವು ತನಗೆ ಬೇಕಾದಂತೆ ಬಳಸಿಕೊಳ್ಳುತ್ತದೆ. ಯಾವುದೇ ಸರಕಾರವೂ ತನ್ನದೇ ಪರಿಭಾಷೆಯಲ್ಲಿ ಮಾತನಾಡುವುದರಿಂದ, ಯಾವುದೇ ಪಕ್ಷವು ಪ್ರತಿಪಕ್ಷವಾಗಿ ಮಾತನಾಡುವ ಧಾಟಿಯೂ ಅಧಿಕಾರಸ್ಥವಾದಾಗ ಮಾತನಾಡುವ ಧಾಟಿಯೂ ಬೇರೆಬೇರೆ. ಇಂಗ್ಲೀಷ್ ಶಿಕ್ಷಣ ನಮ್ಮ ಕಾಲದ ಅನಿವಾರ್ಯತೆ ಎಂಬ ಸತ್ಯವನ್ನು ಒಪ್ಪಿಕೊಳ್ಳುವಾಗಲೇ, ಹಿಂದಿ ಹೇರಿಕೆಯು ತಂದಿಡುತ್ತಿರುವ ಸವಾಲುಗಳ ನಡುವೆ ಕನ್ನಡದ ಕುರಿತ ಪ್ರಶ್ನೆಗಳು ಕೊನೆಗಾಣುವ ಹಾಗೆ ಕಾಣುತ್ತಿಲ್ಲ.







