ಕನ್ನಡ ಮತ್ತು ವರ್ತಮಾನ

ಕ್ಯಾಪಿಟೇಶನ್ ಹಾವಳಿ ವಿಚಿತ್ರ ಪ್ರಮಾಣದಲ್ಲಿ ಹೆಚ್ಚುತ್ತಿದ್ದರೂ ಪೋಷಕರೂ ಲೆಕ್ಕಿಸದೆ ತಮ್ಮ ಮಕ್ಕಳನ್ನು ಎಲ್ಲ ಸುವ್ಯವಸ್ಥಿತವಾಗಿರುವ ಇಂದಿನ ಆಧುನಿಕ ಸ್ಪರ್ಧಾ ಜಗತ್ತಿನ ಮಕ್ಕಳನ್ನು ತಯಾರು ಮಾಡುವ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ರಿಸರ್ವೇಶನ್ ವಿರೋಧಿಸುವ ಮೇಲ್ವರ್ಗದ ಜನ ಈ ಕ್ಯಾಪಿಟೇಶನ್ ಹಾವಳಿಯ ವಿರುದ್ಧ ಮಾತಾಡುವುದಿಲ್ಲ. ಹೀಗಾದಲ್ಲಿ ಕನ್ನಡ ಮಾಧ್ಯಮದ ಗತಿ ಏನು? ಕನ್ನಡ ಉಳಿವಿನ ಗತಿಯೇನು? ಎಂಬ ಪ್ರಶ್ನೆ ಕಾಡುತ್ತದೆ.
ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದ ಮಕ್ಕಳ ಪ್ರಮಾಣ ಕೆಲವೇ ವರ್ಷಗಳ ಕೆಳಗೆ ಶೇ. 83 ಇದ್ದದ್ದು ಈಗ ಶೇ.54ಕ್ಕೆ ಇಳಿದಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದವರ ಸಂಖ್ಯೆ ಶೇ. 7ರಿಂದ ಶೇ. 39ಕ್ಕೆ ಏರಿದೆ. ಶಾಲೆಗಳ ಸಂಖ್ಯೆಯನ್ನು ಗಮನಿಸುವುದಾದರೂ ಸರಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಅನುದಾನ ರಹಿತ ಖಾಸಗಿ ಶಾಲೆಗಳು ಪ್ರತಿವರ್ಷವೂ ಹೆಚ್ಚುತ್ತಲೇ ಇವೆ. ಕರ್ನಾಟಕ ರಾಜ್ಯದಲ್ಲಿ ಆಡಳಿತ ಭಾಷೆಯಾಗಿ, ಶಿಕ್ಷಣದ ಮಾಧ್ಯಮವಾಗಿ, ರಾಜ್ಯಭಾಷೆಯಾಗಿ ಕನ್ನಡವೇ ಇರಬೇಕು ಎಂಬುದು ಎಲ್ಲ ಕನ್ನಡದ ಮನಸ್ಸುಗಳು ಒಪ್ಪುವ ಸಾಮಾನ್ಯ ವಿಷಯ. ಆದರೆ ಕರ್ನಾಟಕದಲ್ಲಿ ಕನ್ನಡವೇ ಸರ್ವಶ್ರೇಷ್ಠ, ಸಾರ್ವಭೌಮ ಭಾಷೆಯಾಗಿಲ್ಲ. ಇಲ್ಲಿ ಕನ್ನಡ ಮಾತನಾಡುವ ಜನರಲ್ಲದೇ ಗಡಿ ಭಾಗದಲ್ಲಿ ತಮಿಳು, ತೆಲಗು, ಮರಾಠಿ, ಕೊಂಕಣಿ, ಮಲೆಯಾಳಿ ಇತ್ಯಾದಿ ಮಾತನಾಡುವ ಜನರು, ತುಳು, ಕೊಡವ, ಕೊರಗ, ಲಂಬಾಣಿ, ಮುಕ್ರಿ ಇತ್ಯಾದಿ ಉಪಭಾಷೆಗಳನ್ನಾಡುವ ಜನರೂ ಇದ್ದಾರೆ. ಅವರೆಲ್ಲರ ಮಾತೃಭಾಷೆ ಅದೇ ಆಗಿದೆ. ಅಂತರ್‌ರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ನಮ್ಮ ಹೆಗಲೇರಿದೆ. ಆಧುನಿಕ ವೇಗದ ಜಗತ್ತಿನ ಜೊತೆ ವಿಜ್ಞಾನ ತಂತ್ರಜ್ಞಾನದ ಬಳಕೆಯಲ್ಲಿ ಇಂಗ್ಲಿಷ್ ಮಾಧ್ಯಮವಾಗಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಕಾರಣದಿಂದ ಇಂಗ್ಲಿಷ್‌ನತ್ತ ಎಲ್ಲರೂ ವಾಲುತ್ತಿದ್ದಾರೆ. ಹಾಗಾದರೆ ಕನ್ನಡ ಮತ್ತು ಕನ್ನಡದ ಸಮಗ್ರತೆ ವರ್ತಮಾನದಲ್ಲಿ ಯಾವ ಸ್ಥಿತಿಯಲ್ಲಿದೆ?
ನಾನು ಕಲಿತದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ಎಂಬ ಹಳ್ಳಿಯ ಶಾಲೆಯಲ್ಲಿ. ಮಾತೃಭಾಷೆಯೂ ಕನ್ನಡವೇ ಆಗಿದ್ದು, ಆ ಭಾಗದ ಜನ ಕನ್ನಡದ ಬಗ್ಗೆ ಅತೀವ ಅಭಿಮಾನ ಹೊಂದಿದವರು. ಪದವಿ ಹಂತದವರೆಗೂ ನಾವೆಲ್ಲ ಕಲಿತದ್ದು ಕನ್ನಡ ಮಾಧ್ಯಮದಲ್ಲಿ. ಇಂಗ್ಲಿಷೊಂದು ನನಗೆ ಕೇವಲ ಐಚ್ಛಿಕ ವಿಷಯವಾಗಿತ್ತು. ಸ್ನಾತಕೋತ್ತರ ಹಂತದಲ್ಲಿ ಇಂಗ್ಲಿಷನ್ನು ಆಯ್ದುಕೊಳ್ಳಲು ಮುಖ್ಯವಾದ ಕಾರಣ ಆ ಕಾಲದಲ್ಲಿ ನನಗಿದ್ದ ಇಂಗ್ಲಿಷ್‌ನ ವ್ಯಾಮೋಹ.. ಶಾಲೆ ಅಥವಾ ಕಾಲೇಜುಗಳಲ್ಲಿ ಆಗ ಪಾಠ ಮಾಡುತ್ತಿದ್ದ ಇಂಗ್ಲಿಷ್ ಶಿಕ್ಷಕರಿಗೆ ಸಿಗುತ್ತಿದ್ದ ಹೆಚ್ಚಿನ ಗೌರವ ಮತ್ತು ಇಂಗ್ಲಿಷ್ ಮಾತನಾಡವ ಜನರನ್ನು ಯಾವುದೋ ಅನ್ಯಗ್ರಹದಿಂದ ಬಂದವರೆಂಬಂತೆ ಅಭಿಮಾನದಿಂದ ನೋಡುತ್ತಿದ್ದ ಜನ. ಇಂಥದ್ದನ್ನು ನೋಡಿ ಆ ಕೀಳರಿಮೆಯ ಕಾರಣ ಕಾಲೇಜು ದಿನಗಳಲ್ಲಿ ಇಂಗ್ಲಿಷನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡಿದ್ದೆ.
ನಮ್ಮದು ಸರಕಾರಿ ಶಾಲೆ. ಪ್ರಾಥಮಿಕ ಶಾಲೆಯಲ್ಲಿ ನಾವೆಲ್ಲರೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು. ಅಂದು ಅಲ್ಲಿ ಇಂಗ್ಲಿಷ್ ಮಾಧ್ಯಮ ಇರಲಿಲ್ಲ. ನಾವು ಇಂಗ್ಲಿಷ್ ಕಲಿತದ್ದು ನೇರವಾಗಿ 5ನೇ ತರಗತಿಗೆ. ಆದರೆ ಬಹುಶಃ 2018ರ ಸುಮಾರಿಗೆ ನಲಿ-ಕಲಿ ಕಾರ್ಯಕ್ರಮದ ಅಡಿಯಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಯುವ ಅವಕಾಶವನ್ನು ಸರಕಾರ ಒದಗಿಸಿತ್ತು. ಇದು ಕನ್ನಡದ ಮೇಲಿನ ದಬ್ಬಾಳಿಕೆ ಇತ್ಯಾದಿ ಕೂಗುಗಳೊಂದಿಗೆ ಪರ ಮತ್ತು ವಿರೋಧಗಳು ಎದ್ದವು ಮತ್ತು ಅಷ್ಟೇ ವೇಗವಾಗಿ ಇಳಿದುಹೋದವು. ನಂತರದಲ್ಲಿ ನಾನು ಕಲಿತ ಅದೇ ಸರಕಾರಿ ಶಾಲೆ ಇಂದು ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯಾಗಿ ಅಪ್‌ಗ್ರೇಡ್ ಆಗಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳೆರಡೂ ಈಗ ಅಲ್ಲಿ ಲಭ್ಯವಿದೆ.
2018ರ ಪೂರ್ವದಲ್ಲಿ ಎಲ್ಲರೂ ಕನ್ನಡ ಮಾಧ್ಯಮಕ್ಕೆ ದಾಖಲಾಗುತ್ತಿದ್ದರೆ ಇಂದು ಆ ದಾಖಲಾತಿಯಲ್ಲಿ ಬದಲಾವಣೆ ಆಗಿದೆ. ಇಂಗ್ಲಿಷ್ ಮಾಧ್ಯಮ ಬಂದಿರುವುದರಿಂದ ಈಗ ಒಂದರಿಂದ ಮೂರನೇ ತರತಿಯವರೆಗೆ ಕನ್ನಡ ಮಾಧ್ಯಮದ ನಲಿ ಕಲಿ ವಿಭಾಗದಲ್ಲಿ ಕೇವಲ 10 ವಿದ್ಯಾರ್ಥಿಗಳಿದ್ದಾರೆ. ಹೆಚ್ಚಿನವರು ಆಂಗ್ಲ ಮಾಧ್ಯಮ ಆರಿಸಿಕೊಂಡಿದ್ದಾರೆ. ಹಾಗಾದರೆ ಸರಕಾರಿ ಶಾಲೆಯಲ್ಲೂ ಇಂಗ್ಲಿಷ್ ಬೋಧನಾ ಮಾಧ್ಯಮವಾದಲ್ಲಿ ನಮ್ಮ ಪೋಷಕರ ಮೊದಲ ಆಯ್ಕೆ ಯಾವುದು ಎಂಬ ಪ್ರಶ್ನೆಗೆ ಯಾವ ವಿಚಾರ ಮಾಡದೇ ಉತ್ತರ ಕೊಡಬಹುದು. ಕನ್ನಡದ ಮೇಲೆ ಇಂಗ್ಲಿಷಿನ ಪ್ರಭಾವ ಹೇಗಿದೆಯೆಂದರೆ ಕನ್ನಡದ ಹೆದ್ದಾರಿಯ ಮೇಲೆ ಕಟ್ಟಿದ ಬೈಪಾಸ್ ರೋಡ್ ಇದ್ದಂತೆ.
ಇದಕ್ಕೆಲ್ಲ ಮುಖ್ಯ ಕಾರಣ ನಾವೆಲ್ಲರೂ ಇಂಗ್ಲಿಷ್ ಎಂಬ ಮೋಹದ ಭಾಷೆಯತ್ತ ವಾಲಿರುವುದು. ಪೋಷಕರಲ್ಲಿ ಇಂಗ್ಲಿಷ್ ಕಲಿತರೆ ಮಾತ್ರ ತಮ್ಮ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗುವುದು. ಆರ್ಥಿಕ ಅವಕಾಶಗಳು, ಹೊರದೇಶಗಳಲ್ಲಿ ದುಡಿಯುವ ಅವಕಾಶಗಳು ಲಭ್ಯವಾಗುವುವು, ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು ಎಂಬ ಭ್ರಮೆ, ಇಂಗ್ಲಿಷ್ ಮಾತನಾಡಲು ಬರುವವರು ಹೆಚ್ಚು ಓದಿಕೊಂಡಿರಬಹುದು ಎಂಬ ಭ್ರಾಂತು. ಇಂಗ್ಲಿಷರ ಬಣ್ಣದ ಬಗೆಗೆ ಇದ್ದ ನಮ್ಮ ಮೋಹದಂತೆ ಇದೂ ಕೂಡಾ ನಮ್ಮ ರಕ್ತದಲ್ಲೇ ಮಿಳಿತಗೊಂಡಿದೆ.
ಈ ವ್ಯಾಮೋಹವೂ ಸುಮ್ಮನೆ ಹುಟ್ಟಿಕೊಂಡಿದ್ದಲ್ಲ. ಜಾಗತೀಕರಣದ ಕಾರಣ ಕನ್ನಡ ಮಾಧ್ಯಮದಲ್ಲಿ ಕಲಿಯುವ ಹಳ್ಳಿಯ ಬಡ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದೇ ಹಿಂದೆ ಬೀಳುತ್ತಾರೆ. ಈ ಸಂಗತಿಯನ್ನೂ ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ನಲಿ ಕಲಿ ಹಂತದಲ್ಲಿ ಸರಕಾರ ತೆಗೆದುಕೊಂಡ ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್ ಒಪ್ಪತಕ್ಕಂತಹ ವಿಚಾರ. ಆದರೆ ಈಗ ಸರಕಾರದ ಪಬ್ಲಿಕ್ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮ ಬಂದು, ಹಳ್ಳಿಯ ಬಹುಸಂಖ್ಯಾತ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ.
ಕರ್ನಾಟಕ ಸರಕಾರ 1994ರಲ್ಲಿ ಹೊರಡಿಸಿದ 1ನೇ ತರಗತಿಯಿಂದ 4ನೇ ತರಗತಿಯವರೆಗಿನ ಶಾಲಾ ಶಿಕ್ಷಣವು ಕರ್ನಾಟಕದಲ್ಲಿ ಕನ್ನಡ ಅಥವಾ ಮಾತೃಭಾಷೆಯಲ್ಲಿರಬೇಕು ಎಂಬ ಆದೇಶಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯ 2014ರಲ್ಲಿ ಈ ಕ್ರಮ ಅಸಾಂವಿಧಾನಿಕ ಎಂದು ತೀರ್ಪಿತ್ತಿದೆ. ಇದು ವ್ಯಕ್ತಿ ಸ್ವಾತಂತ್ಯಕ್ಕೆ ವಿರುದ್ಧವೆಂದು,ಶಿಕ್ಷಣದ ಮಾಧ್ಯಮವನ್ನು ಆಯ್ಕೆ ಮಾಡುವ ಹಕ್ಕು ಮಗುವಿಗೆ ಮತ್ತು ಅದರ ಪೋಷಕರಿಗೆ ಇರುವುದೆಂದು ಹೇಳಿದೆ.
ಈ ಎಲ್ಲ ಕಾರಣಗಳಿಂದ ಇಂಗ್ಲಿಷ್ ಮಾಧ್ಯಮದ ಆಯ್ಕೆಯಲ್ಲಿ ಗಣನೀಯ ಏರಿಕೆ ಆಗಿದೆ. 2002-03ರಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದ ಮಕ್ಕಳ ಪ್ರಮಾಣ ಶೇ. 83 ಇತ್ತು. ಅದೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದವರು ಕೇವಲ ಶೇ. 7. ಆದರೆ ಅದು 2019-20ರ ಪ್ರಕಾರ ಶೇ. 39ರಷ್ಟು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಕನ್ನಡದಲ್ಲಿ ಕಲಿಯುವವರ ಸಂಖ್ಯೆ ಶೇ. 56ಕ್ಕೆ ಇಳಿದಿದೆ. ಇನ್ನು ಶಾಲೆಗಳ ಸಂಖ್ಯೆಯನ್ನು ಗಮನಿಸುವುದಾದರೂ ಸರಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಅನುದಾನ ರಹಿತ ಖಾಸಗಿ ಶಾಲೆಗಳು ಪ್ರತೀ ವರ್ಷವೂ ಹೆಚ್ಚುತ್ತಲೇ ಇವೆ. ಹೆಚ್ಚು ಕಡಿಮೆ ಪ್ರತೀ ವರ್ಷವೂ ಹೊಸ ಅನುದಾನ ರಹಿತ ಶಾಲೆ ಕಾಲೇಜುಗಳನ್ನು ತೆರೆಯಲು ಅನುಮತಿಸಿದ ಸುತ್ತೋಲೆಗಳು ಬರುತ್ತಿರುತ್ತವೆ. ಹಾಗೇ ಅಣಬೆಗಳಂತೆ ಈ ಶಾಲೆಗಳು ಹೆಚ್ಚುತ್ತಲೇ ಇವೆ. ಅವು ಇಲ್ಲಿಯವರೆಗೆ ಪಟ್ಟಣ ಪ್ರದೇಶಗಳನ್ನು ಕೇಂದ್ರೀಕರಿಸಿಕೊಂಡಿದ್ದವು. ಆದರೆ ಇತ್ತೀಚೆಗೆ ಅನುದಾನ ರಹಿತ ವಸತಿ ಶಾಲೆಗಳು ಗುಡ್ಡಗಾಡು ಪ್ರದೇಶಗಳಲ್ಲಿ ತಲೆ ಎತ್ತುತ್ತಿವೆ. ಕ್ಯಾಪಿಟೇಶನ್ ಹಾವಳಿ ವಿಚಿತ್ರ ಪ್ರಮಾಣದಲ್ಲಿ ಹೆಚ್ಚುತ್ತಿದ್ದರೂ ಪೋಷಕರೂ ಲೆಕ್ಕಿಸದೆ ತಮ್ಮ ಮಕ್ಕಳನ್ನು ಎಲ್ಲ ಸುವ್ಯವಸ್ಥಿತವಾಗಿರುವ ಇಂದಿನ ಆಧುನಿಕ ಸ್ಪರ್ಧಾ ಜಗತ್ತಿನ ಮಕ್ಕಳನ್ನು ತಯಾರು ಮಾಡುವ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ರಿಸರ್ವೇಶನ್ ವಿರೋಧಿಸುವ ಮೇಲ್ವರ್ಗದ ಜನ ಈ ಕ್ಯಾಪಿಟೇಶನ್ ಹಾವಳಿಯ ವಿರುದ್ಧ ಮಾತಾಡುವುದಿಲ್ಲ. ಹೀಗಾದಲ್ಲಿ ಕನ್ನಡ ಮಾಧ್ಯಮದ ಗತಿ ಏನು? ಕನ್ನಡ ಉಳಿವಿನ ಗತಿಯೇನು? ಎಂಬ ಪ್ರಶ್ನೆ ಕಾಡುತ್ತದೆ.
ಡಾ. ಕೆ. ಕಸ್ತೂರಿ ರಂಗನ್ ಸಮಿತಿಯ ಶಿಫಾರಸಿನ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ- 2020 ಭಾರತದಲ್ಲಿ ಶೈಕ್ಷಣಿಕ ಮಾದರಿಯಲ್ಲಿನ ಆಮೂಲಾಗ್ರ ಎನ್ನುವಂತಹ ಬದಲಾವಣೆಯ ಕ್ರಮಗಳನ್ನು ರೂಪಿಸಿದೆ. ಹಿಂದೆ ಇದ್ದ ಶೈಕ್ಷಣಿಕ ಹಂತಗಳನ್ನು ಬದಲಾಯಿಸಿದೆ. 5+3+3+4 ಹಂತಗಳಲ್ಲಿ 3ನೇ ವಯಸ್ಸಿನಿಂದ 8ರವರೆಗೆ ಮೊದಲ 5 ವರ್ಷಗಳನ್ನು ಬಾಲವಾಟಿಕಾ ಮತ್ತು ಶಾಲಾಪೂರ್ವ (ಎಲ್‌ಕೆಜಿ ಮತ್ತು ಯುಕೆಜಿ) ಹಾಗೂ 2ನೇ ತರಗತಿಯವರೆಗಿನ ಪ್ರಾಥಮಿಕ, ನಂತರ 3ನೇ ತರಗತಿಯಿಂದ 5ನೇ ತರಗತಿಯವರೆಗೆ ಪೂರ್ವಸಿದ್ಧತಾ ಹಂತ, 6ರಿಂದ 8ರ ವರೆಗೆ ಮಾಧ್ಯಮಿಕ ಹಂತ, ಆನಂತರ 9ನೇ ತರಗತಿಯಿಂದ 12ರವರೆಗೆ ಪ್ರೌಢ ಹಂತ ಎಂದು ಗುರುತಿಸಿದೆ. ಒಟ್ಟು 3ರಿಂದ 18 ವರ್ಷದೊಳಗಿನ ಎಲ್ಲ ಹಂತಗಳನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಿದೆ. ಶಿಕ್ಷಣ ವಂಚಿತರ ಪಟ್ಟಿಯಲ್ಲಿ ಶೂನ್ಯ ದಾಖಲೆಯನ್ನು ಹೊಂದುವ ಮಹತ್ತರ ಉದ್ದೇಶದಿಂದ ಸಮಗ್ರ ಶಿಕ್ಷಣ ಯೋಜನೆಯಂತೆ ದಾಖಲಾತಿಯನ್ನು ಸಾರ್ವತ್ರೀಕರಣಗೊಳಿಸುವ ಘನ ಉದ್ದೇಶ ಹೊಂದಿದೆ.
ಈ ರಾಷ್ಟ್ರೀಯ ಶಿಕ್ಷಣ ನೀತಿ-2020 ಐದನೇ ತರಗತಿಯವರೆಗಿನ ಶಿಕ್ಷಣ ಮಾತೃಭಾಷೆ ಯಾ ಪ್ರಾದೇಶಿಕ ಭಾಷೆ ಅಥವಾ ರಾಜ್ಯ ಭಾಷೆಯಲ್ಲಿ ನೀಡುವುದನ್ನು ಪ್ರಸ್ತಾಪಿಸಿದೆ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಆರೋಗ್ಯಕರ ಎನ್ನುವುದು ಎಲ್ಲರೂ ಒಪ್ಪುವ ವಿಚಾರ. ಆದರೆ ಮಾಧ್ಯಮದ ಪ್ರಶ್ನೆ (ಲಿಪಿ ಮತ್ತು ಪಠ್ಯ) ಬಂದಾಗ ಅದು ಕನ್ನಡದಲ್ಲಿಯೇ ಇರಬೇಕೆಂಬ ಕಡ್ಡಾಯ ಇಲ್ಲದಿರುವುದು ಕನ್ನಡದ ಮೇಲೆ ದೊಡ್ಡ ಕೊಡಲಿಯೇಟು. ಇದು ಇಂಗ್ಲಿಷ್ ಮಾಧ್ಯಮದ ಆಯ್ಕೆಗೆ ಅವಕಾಶ ಕಲ್ಪಿಸುತ್ತದೆ.
ಕನ್ನಡೇತರ ವಿದ್ಯಾರ್ಥಿಗಳು ಇಂಗ್ಲಿಷನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜಾಗತೀಕರಣದ ಕಾರಣ ಉದ್ಯೋಗ ಮತ್ತು ವಿದೇಶಿ ವ್ಯಾಮೋಹಕ್ಕೆ ಒಳಗಾಗಿರುವ ಕನ್ನಡ ಮಾತೃಭಾಷೆಯ ಪೋಷಕ ವರ್ಗವೂ ಆಧುನಿಕ ಜಗತ್ತಿನ ಜೊತೆ ತಮ್ಮ ಮಕ್ಕಳು ಸಮಾನ ಅವಕಾಶಗಳಿಂದ ವಂಚಿತರಾಗಬಾರದೆಂದು, ಆಂಗ್ಲ ಶಿಕ್ಷಣದಲ್ಲಿ ಮಾತ್ರ ಉದ್ಯೋಗ ಪ್ರಾಪ್ತಿಗೆ ವಿಪುಲ ಅವಕಾಶಗಳು ಒದಗುತ್ತವೆಯೆಂದೂ, ಇಂಗ್ಲಿಷ್ ಮಾಧ್ಯಮವನ್ನು ಆಯ್ಕೆ ಮಾಡಬಹುದು. ಇದು ಕನ್ನಡವನ್ನು ಕಡೆಗಣಿಸುವ ಇನ್ನೊಂದು ವ್ಯವಸ್ಥೆ.
ಈಗಾಗಲೇ ಮೇಲೆ ಹೇಳಿದಂತೆ ಕರ್ನಾಟಕದಲ್ಲಿ ಗಡಿಭಾಗದ ಭಾಷೆಗಳ ಜನರು ಅತ್ಯಧಿಕವಾಗಿದ್ದಾರೆ. ಹಾಗೇ ಒಳಸಂಸ್ಕೃತಿ ಕರ್ನಾಟಕದಲ್ಲಿ ಹೇರಳವಾಗಿದ್ದು ಅನೇಕ ಉಪಭಾಷೆಗಳು ಇಲ್ಲಿವೆ. ಈಗಿನ ಶಿಕ್ಷಣ ನೀತಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತಗಳಲ್ಲಿ ಮಕ್ಕಳ ಮಾತೃಭಾಷೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನವನ್ನು ಶಿಕ್ಷಕ ಮಾಡಬೇಕೆಂದು ಒತ್ತಾಯದ ಮಾಧ್ಯಮದ ಬೋಧನೆಯನ್ನು ಮಾಡಬಾರದೆಂದು ಹೇಳುತ್ತದೆ. ಮಕ್ಕಳ ಮನೆ ಭಾಷೆಯಲ್ಲಿಯೇ ಚಿಕ್ಕ ಪ್ರಾಯದ ಮಕ್ಕಳು ಕಲಿತು ನಂತರದ ಹಂತಗಳಲ್ಲಿ ಬೋಧನಾ ಮಾಧ್ಯಮವನ್ನು ಅರ್ಥಮಾಡಿಕೊಳ್ಳಲು ಸಹಕಾರಿ ಎನ್ನುತ್ತದೆ. ಇದರಿಂದ ನಾಡಿನ ಹೆಮ್ಮೆಯ ಭಾಷೆ ಕನ್ನಡದ ಮೇಲಿನ ಅಭಿಮಾನ ಕ್ರಮೇಣ ಕಡಿಮೆಯಾಗುತ್ತದೆ.
ಕಾರಣ ಪ್ರಾಥಮಿಕ ಹಂತದಲ್ಲಿ ಏಕರೂಪದ ಮಾಧ್ಯಮ ವ್ಯವಸ್ಥೆ ಮಾತ್ರ ಕನ್ನಡವನ್ನು ಉಳಿಸಬಹುದು. ಅದು ಕೇವಲ ಕನ್ನಡ ಮಾಧ್ಯಮಕ್ಕೆ ಅವಕಾಶ ನೀಡಬೇಕು. ಪ್ರೌಢ ಮತ್ತು ಉನ್ನತ ಶಿಕ್ಷಣದ ಹಂತದಲ್ಲಿ ಇಂಗ್ಲಿಷ್ ಅಥವಾ ಇತರ ಭಾಷೆಗಳ ಆಯ್ಕೆಗೆ ಅವಕಾಶ ಮಾಡಬಹುದು. ಬೇರೆ ಎಲ್ಲವೂ ಒಂದಲ್ಲ ಒಂದು ರೀತಿಯಿಂದ ಕನ್ನಡಕ್ಕೆ ಮಾರಕ ಕ್ರಮಗಳೇ ಆಗಿವೆ.







