ಇಮ್ರಾನ್ ಪ್ರತಿಭಟನಾ ರ‍್ಯಾಲಿಯ ಟ್ರಕ್‌ನಡಿ ಸಿಲುಕಿ ಪತ್ರಕರ್ತೆ ಮೃತ್ಯು

ಇಸ್ಲಮಾಬಾದ್, ಅ.31: ದೇಶದಲ್ಲಿ ತಕ್ಷಣ ಸಾರ್ವತ್ರಿಕ ಚುನಾವಣೆ ನಡೆಯಬೇಕು ಎಂದು ಆಗ್ರಹಿಸಿ ಮತ್ತು ಸರಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಮಾಜಿ ಪ್ರಧಾನಿ ಇಮ್ರಾನ್‌ಖಾನ್ (Imran Khan)ಆರಂಭಿಸಿರುವ ರಾಜಧಾನಿಗೆ ಸುದೀರ್ಘ ಯಾತ್ರೆ ರವಿವಾರ ಸ್ಥಗಿತಗೊಂಡಿದೆ. ರ‍್ಯಾಲಿಯಲ್ಲಿ ಇಮ್ರಾನ್‌ಖಾನ್ ಪ್ರಯಾಣಿಸುತ್ತಿದ್ದ ಕಂಟೈನರ್ ಟ್ರಕ್‌ನಡಿ ಸಿಲುಕಿ ಚಾನೆಲ್ 5ರ ಪತ್ರಕರ್ತೆ ಸದಾಫ್ ನಯೀಮ್(Sadaf Naeem) ಮೃತಪಟ್ಟಿದ್ದಾರೆ. ಅವರು ಇಮ್ರಾನ್‌ಖಾನ್ ಅವರ ಸಂದರ್ಶನಕ್ಕೆ ಪ್ರಯತ್ನಿಸುತ್ತಿದ್ದಾಗ ಅಕಸ್ಮಾತ್ ಟ್ರಕ್‌ನ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ದುನಿಯಾ ಟಿವಿ ವರದಿ ಮಾಡಿದೆ.
ದುರಂತ ಘಟನೆಯ ಬಳಿಕ, ದಿನದ ಮಟ್ಟಿಗೆ ರ‍್ಯಾಲಿಯನ್ನು ಸ್ಥಗಿತಗೊಳಿಸಿರುವುದಾಗಿ ಪಿಟಿಐ ಪಕ್ಷ ಹೇಳಿದೆ. ಮೃತ ಪತ್ರಕರ್ತೆಯ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು ಮೃತ ಪತ್ರಕರ್ತೆ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವುದಾಗಿ ಇಮ್ರಾನ್‌ಖಾನ್ ಹೇಳಿದ್ದಾರೆ.
ಪತ್ರಕರ್ತೆ ಸದಾಫ್ ನವೀನ್ ಅವರ ದುರಂತ ಅಂತ್ಯ ಅತ್ಯಂತ ಆಘಾತ ತಂದಿದೆ ಎಂದು ಪಾಕ್ ಪ್ರಧಾನಿ ಶಹಬಾಝ್ ಶರೀಫ್(Shahbaz Sharif), ಮಾಹಿತಿ ಸಚಿವೆ ಮರಿಯಮ್ ಔರಂಗಝೇಬ್(Maryam Aurangzeb) ಸಂತಾಪ ಸೂಚಿಸಿದ್ದಾರೆ.