ಸುರತ್ಕಲ್ ಟೋಲ್ ತೆರವುಗೊಳಿಸಲು ಆಗ್ರಹ: 4ನೇ ದಿನಕ್ಕೆ ಕಾಲಿಟ್ಟ ಆಹೋರಾತ್ರಿ ಧರಣಿ
ಸುರತ್ಕಲ್: ತುಳುನಾಡಿನ ಘಟ್ಟದ ತಪ್ಪಲು ಹಾಗೂ ಸಮುದ್ರ ದಂಡೆಯ ಜನರನ್ನು ಬೆಸೆಯುವ ಸಾಧನವಾಗಿ ಟೋಲ್ ಗೇಟ್ ವಿರೋಧಿ ಹೋರಾಟ ಪರಿವರ್ತನೆಗೊಂಡಿದೆ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿ ಟೋಲ್ ತೆರವುಗೊಳಿಸಲು ಆಗ್ರಹಿಸಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದ 4ನೇ ದಿನ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ವಿಚಾರದಲ್ಲಿ ಬಿಜೆಪಿ ಸರಕಾರದ ಭಂಡತನ ಅಚ್ಚರಿ ಮೂಡಿಸುತ್ತಿದೆ. ಕರಾವಳಿಯ ಜನ ಸರಕಾರದ ಟೋಲ್ ಸುಲಿಗೆ ನೀತಿಯ ವಿರುದ್ದ ಆಕ್ರೋಶ ಭರಿತರಾಗಿದ್ದು, ಘಟ್ಟದ ಬದಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಜನರೂ ಸಮುದ್ರ ದಂಡೆಯ ಸುರತ್ಕಲ್ ನಲ್ಲಿರುವ ಟೋಲ್ ಗೇಟ್ ವಿರುದ್ದದ ಹೋರಾಟದಲ್ಲಿ ಭಾಗವಹಿಸತೊಡಗಿದ್ದಾರೆ. ಬಿಜೆಪಿ ಸಂಸದ, ಶಾಸಕರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರರ್ಭ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಶಾಸಕರುಗಳಾದ ಅಭಯಚಂದ್ರ ಜೈನ್, ಮೊಯ್ದಿನ್ ಬಾವಾ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್, ಶಾಲೆಟ್ ಪಿಂಟೊ, ಬಿ ಕೆ ಇಮ್ತಿಯಾಜ್, ಪುರುಷೋತ್ತಮ ಚಿತ್ರಾಪುರ, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಶ್ರೀನಾಥ್ ಕುಲಾಲ್, ರಮೇಶ್ ಟಿ ಎನ್, ರಾಜೇಶ್ ಪೂಜಾರಿ, ಡಾ ರಾಜಾರಾಮ್ ಉಪ್ಪಿನಂಗಡಿ, ಮುಹಮ್ಮದ್ ಕುಂಜತ್ತಬೈಲ್, ಆನಂದ ಅಮೀನ್, ಅಕ್ಬರ್ ಅಲಿ ಮುಕ್ಕ, ಹರೀಶ್ ಪೇಜಾವರ, ಮತ್ತಿತರರು ಉಪಸ್ಥಿತರಿದ್ದರು.
ಧರಣಿ ಸ್ಥಳಕ್ಕೆ ಚಾಪೆ, ಹಾಸಿನ ಸಮೇತ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಬಂದು ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು. ಇವರ ಜೊತೆಗೆ ಮಹಿಳಾ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ, ಮಾಜಿ ಸಚಿವ ಅಭಯಚಂದ್ರ ಜೈನ್ ಸೇರಿದಂತೆ ಕಾಂಗ್ರೆಸ್ ಮಹಿಳಾ ಘಟಕದ ವಿವಿಧ ಪದಾಧಿಕಾರಿಗಳು, ವಿವಿಧ ಸಮಾನ ಮನಸ್ಕ ಸಂಘಟನೆಗಳ ಪದಾಧಿಕಾರಿಗಳು ಧರಣಿ ಸ್ಥಳದಲ್ಲಿ ಉಳಿದುಕೊಂಡು ಬೆಂಬಲ ವ್ಯಕ್ತಪಡಿಸಿದರು.
ನಾಳೆ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಧರಣಿಯ ಸ್ಥಳದಲ್ಲೇ ಧ್ವಜಾರೋಹನ ಗೈಯ್ಯುವುದರೊಂದಿಗೆ ಆಹೋರಾತ್ರಿ ಧರಣಿಯ ಐದನೇ ದಿನವನ್ನು ಆರಂಭಿಸಲಾಗುವುದು ಎಂದು ಸುರತ್ಕಲ್ ಟೋಲ್ ಗೇಟ್‌ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.