ಗುಜರಾತ್ ಸೇತುವೆ ದುರಂತ: ಸುಪ್ರೀಂ, ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಕಾಂಗ್ರೆಸ್ ಆಗ್ರಹ
ರಾಜಕೀಯಗೊಳಿಸಲು ಬಯಸುವುದಿಲ್ಲ: ರಾಹುಲ್ ಗಾಂಧಿ

ಹೊಸದಿಲ್ಲಿ, ಅ. 31: ತೂಗು ಸೇತುವ ಕುಸಿದು ಸಂಭವಿಸಿದ ದುರಂತದ ಕುರಿತು ಸುಪ್ರೀಂ ಕೋರ್ಟ್ ಅಥವಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ.
ದುರಂತದ ಸಂತ್ರಸ್ತರಿಗೆ ಹಣಕಾಸು ಹಾಗೂ ವೈದ್ಯಕೀಯ ನೆರವು ನೀಡುವಂತೆ ಕೂಡ ಕಾಂಗ್ರೆಸ್ ಮನವಿ ಮಾಡಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಐದು ದಿನಗಳ ಹಿಂದೆ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತವಾದ ಸೇತುವೆ ಕುಸಿಯಲು ಕಾರಣ ಏನೆಂಬುದನ್ನು ತಿಳಿಯಬೇಕು ಎಂದು ಹೇಳಿದರು.
‘‘ಅತ್ಯಧಿಕ ಜನರು ಸೇತುವೆ ಮೇಲೆ ಸಂಚರಿಸಲು ಯಾಕೆ ಅವಕಾಶ ನೀಡಲಾಯಿತು’’ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜಕೀಯಗೊಳಿಸಲು ಬಯಸುವುದಿಲ್ಲ: ರಾಹುಲ್ ಗಾಂಧಿ
ಸೇತುವೆ ಕುಸಿತವನ್ನು ರಾಜಕೀಯಗೊಳಿಸುವ ಯಾವುದೇ ಪ್ರಯತ್ನ ಮೃತಪಟ್ಟವರಿಗೆ ತೋರುವ ಅಗೌರವ ಆಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಹೇಳಿದ್ದಾರೆ.
ಪ್ರಸಕ್ತ ತೆಲಂಗಾಣದ ಮೂಲಕ ಹಾದು ಹೋಗುವ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಯ ನೇಪಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅವರಲ್ಲಿ ಪತ್ರಕರ್ತರು ‘‘ಮೊರ್ಬಿಯಲ್ಲಿ ನಡೆದ ಈ ದುರಂತಕ್ಕೆ ಯಾರು ಹೊಣೆಗಾರರು ಎಂದು ನೀವು ಭಾವಿಸುತ್ತೀರಿ?’’ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ‘‘ನಾನು ಈ ಘಟನೆಯನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ. ಅಲ್ಲಿ ಜನರು ಜೀವ ಕಳೆದುಕೊಂಡಿದ್ದಾರೆ. ರಾಜಕೀಯಗೊಳಿಸುವುದರಿಂದ ಅವರನ್ನು ಅಗೌರವಿಸಿದಂತೆ ಆಗುತ್ತದೆ. ಆದುದರಿಂದ ನಾನು ಅದನ್ನು ಮಾಡಲಾರೆ’’ ಎಂದರು.







