ಉಗಾಂಡಾದಲ್ಲಿ ಪೊಲೀಸರಿಂದ ಭಾರತೀಯ ಉದ್ಯಮಿ ಹತ್ಯೆ: ವರದಿ

ಜೋಹಾನ್ಸ್‌ಬರ್ಗ್: ಉಗಾಂಡಾ (Uganda)ದ ಕಿಸೊರೊ ಪಟ್ಟಣದಲ್ಲಿ ಭಾರತದ ಯುವ ಉದ್ಯಮಿಯೊಬ್ಬರನ್ನು ಪೊಲೀಸ್ ಪೇದೆಯೊಬ್ಬ ಗುಂಡು ಹೊಡೆದು ಸಾಯಿಸಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೃತ ಉದ್ಯಮಿಯನ್ನು ಕುಂತಜ್ ಪಟೇಲ್ (24) ಎಂದು ಗುರುತಿಸಲಾಗಿದೆ.
ಉಗಾಂಡಾದ ಫೀಲ್ಡ್ ಫೋರ್ಸ್ ಯುನಿಟ್ (ಎಫ್‍ಎಫ್‍ಯು) ಕಾನ್‍ಸ್ಟೇಬಲ್ ಎಲಿಯೊಡ ಗುಮಿಝಮು (21) (Police constable Elioda Gumizamu) ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಅಪರಾಧ ನಡೆದ ಸ್ಥಳದಿಂದ ಪಲಾಯನ ಮಾಡಲು ಯತ್ನಿಸಿದ ಆರೋಪದಲ್ಲಿ ಅಕ್ಟೋಬರ್ 27ರಂದು ಪೊಲೀಸ್ ಪೇದೆಯನ್ನು ಬಂಧಿಸಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಡೈಲಿ ಮಾನಿಟರ್ ಪತ್ರಿಕೆ ವರದಿ ಮಾಡಿದೆ.
ಆರೋಪಿ ಪೊಲೀಸ್ ಇತರರ ಜತೆಗೆ ಹಾರ್ಡ್‌ವೇರ್ ವ್ಯವಹಾರ ನಡೆಸುತ್ತಿದ್ದ ಭಾರತೀಯ ಮಳಿಗೆಗೆ ಗುರುವಾರ ಭೇಟಿ ನೀಡಿ ಭಾರತದ ಉದ್ಯಮಿಯ ಎದೆಗೆ ಗುಂಡುಹೊಡೆದು ಸಾಯಿಸಿದ್ದಾನೆ ಎಂದು ಪ್ರಾದೇಶಿಕ ಪೊಲೀಸ್ ವಕ್ತಾರ ಎಲ್ಲಿ ಮಟ್ಟೆ ಅವರ ಹೇಳಿಕೆಯನ್ನು ಪತ್ರಿಕಾ ವರದಿ ಉಲ್ಲೇಖಿಸಿದೆ.
ಸಂತ್ರಸ್ತ ಉದ್ಯಮಿಯನ್ನು ಸೆಂಟ್ ಫ್ರಾನ್ಸಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲ ಗಂಟೆಗಳ ಬಳಿಕ ಪಟೇಲ್ ಮೃತಪಟ್ಟರು ಎಂದು ಅವರು ವಿವರಿಸಿದ್ದಾರೆ. ತಾನು ಹಾಗೂ ಮಾಲಕರು ಗ್ರಾಹಕರೊಬ್ಬರ ಬಳಿ ಮಾತನಾಡುತ್ತಿದ್ದಾಗ ಬಂದೂಕು ಹೊಂದಿದ್ದ ಪೊಲೀಸ್ ಗಂಡು ಹೊಡೆದದ್ದಾಗಿ ಕುಂತಜ್ ಅವರ ಅಂಗಡಿಯ ಕಾರ್ಮಿಕ ಗಿಲ್ಬರ್ಟ್ ಮಿಸೇನಝಾ ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.