10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ
![10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ](https://www.varthabharati.in/sites/default/files/images/articles/2022/11/1/354827-1667277854.jpg)
ಗುರುಗ್ರಾಮ: ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಗುರುಗ್ರಾಮ ಹೋಟೆಲ್ಗೆ ಕರೆದೊಯ್ದು ಆಕೆಯ ಸ್ನೇಹಿತ ಸೇರಿದಂತೆ ಐದು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಸೋಮವಾರ ವರದಿಯಾಗಿದೆ.
ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಐದು ಮಂದಿಯ ಪೈಕಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
14 ವರ್ಷ ವಯಸ್ಸಿನ ಸಂತ್ರಸ್ತೆಯ ತಾಯಿ ಈ ಸಂಬಂಧ ದೂರು ಸಲ್ಲಿಸಿದ್ದಾರೆ. ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ವಿದ್ಯಾರ್ಥಿನಿ ಮನೆ ಬಿಟ್ಟಿದ್ದಳು. ಪಕ್ಕದ ಪಾರ್ಕ್ಗೆ ವಾಕಿಂಗ್ ಹೋಗಿರಬೇಕು ಎಂದು ಭಾವಿಸಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ. ಆಕೆ ಬಹಳಷ್ಟು ಹೊತ್ತು ಕಳೆದ ಬಳಿಕವೂ ಬಾರದಿದ್ದಾಗ ಹುಡುಕಾಟ ಆರಂಭಿಸಿದರೂ ಪತ್ತೆಯಾಗಲಿಲ್ಲ. ರವಿವಾರ ಬೆಳಗ್ಗೆ 10ರ ಸುಮಾರಿಗೆ ಮನೆಯ ಪಕ್ಕದಲ್ಲಿ ವಿದ್ಯಾರ್ಥಿನಿ ಪತ್ತೆಯಾದಳು ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ರಾತ್ರಿಯಿಡೀ ಎಲ್ಲಿದ್ದಿ ಎಂದು ತಾಯಿ ಪ್ರಶ್ನಿಸಿದಾಗ, ಇಬ್ಬರು ಸ್ನೇಹಿತರು ಬೈಕ್ನಲ್ಲಿ ಹೋಟೆಲ್ಗೆ ಕರೆದೊಯ್ದಿದ್ದು, ಅಲ್ಲಿ ಇತರ ಮೂವರು ಸೇರಿ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ವಿವರಿಸಿದಳು. ಈ ಘಟನೆ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದರು ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮತ್ತು ಐಪಿಸಿ ಸೆಕ್ಷನ್ 376ಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅತ್ಯಾಚಾರ ನಡೆದಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.