ಕನ್ನಡ ಸಾಹಿತ್ಯ ನಡೆದ ಹಾದಿಯಲ್ಲೊಂದು ಇಣುಕು ನೋಟ
ಚಳವಳಿಗಳು ಕಟ್ಟಿದ ಕನ್ನಡದ ‘ಮಹಾಮನೆ’

ಇಂಗ್ಲೆಂಡ್‌ನ ಒಂದು ಮೂಲೆಯಲ್ಲಿ ಹಳ್ಳಿಗರ ಭಾಷೆಯಾಗಿದ್ದ ಇಂಗ್ಲಿಷ್ ತನ್ನೊಳಗೆ ಎಲ್ಲ ಭಾಷೆಗಳ ಶಬ್ದಗಳನ್ನೂ ಅಳವಡಿಸಿಕೊಳ್ಳುತ್ತ ಈಗ ವಿಶ್ವದಾದ್ಯಂತ ಸಂವಹನ ಭಾಷೆಯಾಗಿ ರೂಪುಗೊಂಡಿದ್ದನ್ನೂ ಕಂಡಿದ್ದೇವೆ. ಹಾಗೆ ವಿಶ್ವಭಾಷೆಯಾಗಲು ಇಂಗ್ಲಿಷ್‌ನಲ್ಲಿ ಉಂಟಾದ ಸಾಹಿತ್ಯಕ ಚಳವಳಿಗಳೂ ಮುಖ್ಯ ಕಾರಣ ಎಂಬುದನ್ನು ಮರೆಯಲಾಗದು. ಅಂತೆಯೇ ಕನ್ನಡ ಕೂಡ ಹಲವಾರು ಏಳುಬೀಳುಗಳನ್ನು ಹತ್ತಾರು ಸಾಹಿತ್ಯಕ ಚಳವಳಿಗಳನ್ನು ಕಂಡು ಈಗ ಬಲಿಷ್ಠ ಭಾಷೆ ಎನ್ನಿಸಿಕೊಳ್ಳುತ್ತಿರುವುದನ್ನು ಅಲ್ಲಗಳೆಯಲಾಗದು.
ಸಾಹಿತ್ಯ ಸದಾ ಚಲನಶೀಲವಾಗಿರಬೇಕು. ಹಾಗೆ ಚಲನಶೀಲವಾಗಿರಬೇಕೆಂದರೆ ಅದು ನಿಂತ ನೀರಾಗಬಾರದು. ಅದಾಗಬಾರದು ಎಂದರೆ ತನ್ನಷ್ಟಕ್ಕೆ ತಾನು ಮುಂದುವರಿಯುವುದನ್ನು ರೂಢಿಸಿಕೊಳ್ಳಬೇಕು. ಇಲ್ಲವೆಂದಾದಲ್ಲಿ ಪಾಚಿಗಟ್ಟಿ ಅದು ಉಸಿರುಗಟ್ಟುತ್ತದೆ. ಜಗತ್ತಿನ ಹಲವಾರು ಭಾಷೆಗಳು ಒಂದು ಕಾಲದಲ್ಲಿ ಸಾಹಿತ್ಯಿಕವಾಗಿ ಮೆರೆದವುಗಳೆಲ್ಲ ನಂತರ ಮೃತಭಾಷೆಗಳಾಗಿ ಹೋಗಿದ್ದನ್ನು ನೋಡಿದ್ದೇವೆ. ಯಾವ ಭಾಷೆಯನ್ನು ಅತ್ಯಂತ ಶ್ರೇಷ್ಠ ದೇವಭಾಷೆ ಎಂದೆಲ್ಲ ಬಿಂಬಿಸಿ ಜನಸಾಮಾನ್ಯರಿಂದ ದೂರವಿಟ್ಟ ಭಾಷೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಉದಾಹರಣೆಗೆ ಸಂಸ್ಕೃತ, ರೋಮನ್, ಲ್ಯಾಟಿನ್ ಮುಂತಾದ ಭಾಷೆಗಳು ಸಾಹಿತ್ಯಕವಾಗಿ ಮೇರು ಮಟ್ಟದಲ್ಲಿದ್ದೂ ಜನಸಾಮಾನ್ಯರಿಗೆ ಎಟುಕದೆ ಹುಳಿದ್ರಾಕ್ಷಿಯಾಗಿದ್ದನ್ನು ಕಾಣುತ್ತೇವೆ. ಅದಕ್ಕೆ ವ್ಯತಿರಿಕ್ತವಾಗಿ ಇಂಗ್ಲೆಂಡ್‌ನ ಒಂದು ಮೂಲೆಯಲ್ಲಿ ಹಳ್ಳಿಗರ ಭಾಷೆಯಾಗಿದ್ದ ಇಂಗ್ಲಿಷ್ ತನ್ನೊಳಗೆ ಎಲ್ಲ ಭಾಷೆಗಳ ಶಬ್ದಗಳನ್ನೂ ಅಳವಡಿಸಿಕೊಳ್ಳುತ್ತ ಈಗ ವಿಶ್ವದಾದ್ಯಂತ ಸಂವಹನ ಭಾಷೆಯಾಗಿ ರೂಪುಗೊಂಡಿದ್ದನ್ನೂ ಕಂಡಿದ್ದೇವೆ. ಹಾಗೆ ವಿಶ್ವಭಾಷೆಯಾಗಲು ಇಂಗ್ಲಿಷ್‌ನಲ್ಲಿ ಉಂಟಾದ ಸಾಹಿತ್ಯಕ ಚಳವಳಿಗಳೂ ಮುಖ್ಯ ಕಾರಣ ಎಂಬುದನ್ನು ಮರೆಯಲಾಗದು. ಅಂತೆಯೇ ಕನ್ನಡ ಕೂಡ ಹಲವಾರು ಏಳುಬೀಳುಗಳನ್ನು ಹತ್ತಾರು ಸಾಹಿತ್ಯಕ ಚಳವಳಿಗಳನ್ನು ಕಂಡು ಈಗ ಬಲಿಷ್ಠ ಭಾಷೆ ಎನ್ನಿಸಿಕೊಳ್ಳುತ್ತಿರುವುದನ್ನು ಅಲ್ಲಗಳೆಯಲಾಗದು.
ಹಾಗೆನೋಡಿದರೆ ಕನ್ನಡದಲ್ಲಿ ಸಾಹಿತ್ಯ ಕೃತಿಗಳನ್ನು ಬರೆಯಲು ಪ್ರಾರಂಭಿಸಿದ್ದೇ ಕನ್ನಡ ಸಾಹಿತ್ಯದ ಮೊದಲ ಚಳವಳಿ ಎನ್ನಬಹುದು. ದೊರೆತಿರುವ ಮೂಲಗಳ ಪ್ರಕಾರ ಜೈನ ಕವಿಗಳು ಜನಸಾಮಾನ್ಯರಲ್ಲಿ ಜೈನ ಧರ್ಮವನ್ನು ಪ್ರಚುರಪಡಿಸುವ ಉದ್ದೇಶದಿಂದ ಬರೆಯಲಾರಂಭಿಸಿದ ಈ ಕೃತಿಗಳು ಕನ್ನಡದ ಮಟ್ಟಿಗೆ ಬಹುದೊಡ್ಡ ಕ್ರಾಂತಿ. ಕೇವಲ ಸಂಸ್ಕೃತವನ್ನು ಮಾತ್ರ ಕಾವ್ಯ ರಚನೆಗೆ ಬಳಸುತ್ತ ಇಡೀ ಸಾಹಿತ್ಯ ಲೋಕವನ್ನು ಸಾಮಾನ್ಯ ಜನರ ಕೈಗೆಟುಕದಂತೆ ನೋಡಿಕೊಂಡಿದ್ದ ಪಟ್ಟಭದ್ರರ ಹುನ್ನಾರಗಳನ್ನೆಲ್ಲ ಮೀರಿ ಕನ್ನಡದಲ್ಲಿ ಸಾಹಿತ್ಯ ರಚನೆಯಾಗಿದ್ದು ಆ ಕಾಲದ ಅತಿದೊಡ್ಡ ಘಟಸ್ಫೋಟ.
ನಂತರದ ಕನ್ನಡ ಸಾಹಿತ್ಯದ ಮಾರ್ಗ ಧರ್ಮದ ಹೆಚ್ಚುಗಾರಿಕೆಯನ್ನು ತೋರಿಸುವುದಷ್ಟೇ ಆಗಿಹೋಯಿತು. ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಇದು ಮುಖ್ಯವಾದುದಾದರೂ ಜನಸಾಮಾನ್ಯರಿಗೆ ಅಂತಹ ಅನುಕೂಲವೇನೂ ಆಗಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಆದರೆ ಶರಣ ಚಳವಳಿ ಮಾತ್ರ ಸಾಹಿತ್ಯದ ದೃಷ್ಟಿಯಿಂದ ಹಾಗೂ ಜನಸಾಮಾನ್ಯರ ದೃಷ್ಟಿಯಿಂದ ಹೆಚ್ಚು ಮಹತ್ವಪೂರ್ಣವಾದದ್ದು. ವಿಶ್ವದಲ್ಲೇ ಅತಿ ವಿಶಿಷ್ಟ ಪ್ರಕಾರದ ಸಾಹಿತ್ಯ ಎಂದು ಗುರುತಿಸಿಕೊಂಡಿದೆ. ಸಾಮಾಜಿಕವಾಗಿ ಕೂಡ ಶರಣ ಚಳವಳಿ ಹೆಚ್ಚಿನ ಕೊಡುಗೆ ನೀಡಿದೆ. ಇಲ್ಲಿಯವರೆಗೆ ಕೇವಲ ರಾಜಾಶ್ರಯದಲ್ಲಿದ್ದ ಸಾಹಿತ್ಯ ಜನರ ಕಣ್ಣಲ್ಲಿ ಯಕಶ್ಚಿತ್ ಎನ್ನಿಸಿಕೊಂಡಂತಹ ಸಾಮಾನ್ಯ ಮಹಿಳೆ ಸೂಳೆ ಸಂಕವ್ವನವರೆಗೂ ಬರಲು ಕಾರಣವಾಗಿದ್ದು ವಚನ ಚಳವಳಿ. ಕಾಯಕದ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿದ್ದ ಈ ಚಳವಳಿಯಿಂದಾಗಿ ಕಾಯಕದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡವರೆಲ್ಲ ಶರಣರಾದರು. ವಚನಕಾರರಾದರು. ಇದು ಕನ್ನಡ ಸಾಹಿತ್ಯದ ದಿಕ್ಕನ್ನು ಬದಲಿಸಿದ ಅತಿದೊಡ್ಡ ಪ್ರವಾಹ. ಜನಸಾಮಾನ್ಯರು ಕೇವಲ ಓದಬಹುದಾಗಿದ್ದ ಸಾಹಿತ್ಯವನ್ನು ಅವರೂ ರಚಿಸುವಂತಾಗಿದ್ದು ಭವಿಷ್ಯದ ಸಾಹಿತ್ಯಕ ಬೆಳವಣಿಗೆಗೆ ಮುನ್ಸೂಚಿಯಂತಿತ್ತು.
ಅದರ ನಂತರದ ದಿನಗಳಲ್ಲಿ ಮತಧರ್ಮಗಳ ಪ್ರಾಬಲ್ಯ ಮುಂದುವರಿದರೂ ಸಾಹಿತ್ಯದಲ್ಲಿ ಎಲ್ಲರೂ ತೊಡಗಿಕೊಳ್ಳುವಂತಾದದ್ದು ಹಾಗೂ ಮಹಿಳೆಯರೂ ಸಾಹಿತ್ಯ ರಚನೆಯಲ್ಲಿ ಉತ್ಸಾಹ ತೋರಿದ್ದು ಬಹುಮುಖ್ಯ. ಆಂಗ್ಲ ಸಾಹಿತ್ಯದ ಇತಿಹಾಸವನ್ನು ಗಮನಿಸಿದರೆ ಹದಿನೇಳನೇ ಶತಮಾನದಲ್ಲೂ ತಾನೊಬ್ಬಳು ಲೇಖಕಿ ಎಂದುಕೊಳ್ಳಲು ಹಿಂಜರಿಯುವ ವಾತಾವರಣ ಇತ್ತು. ಆದರೆ ಆ ಸಮಯದಲ್ಲೂ ಕೆಲವರಾದರೂ ಮಹಿಳೆಯರು ಬರವಣಿಗೆಯಲ್ಲಿ ತೊಡಗಿದ್ದು ಗಮನಿಸಬೇಕಾದ ವಿಷಯ.
ಹೊಸಗನ್ನಡದ ಆದಿಯಲ್ಲಿ ಅಂತ್ಯಪ್ರಾಸವನ್ನು ಬಿಟ್ಟು ಕಾವ್ಯರಚನೆ ಮಾಡಿದ್ದು ಹಾಗೂ ಅದೇ ಸಮಯದಲ್ಲಿ ಪಾಶ್ಚಾತ್ಯ ಸಾಹಿತ್ಯದ ಅನುವಾದದಲ್ಲಿ ಆಸಕ್ತಿ ತೋರಿದ್ದನ್ನು ಉಪೇಕ್ಷಿಸುವಂತಿಲ್ಲ. ಬಿ.ಎಂ.ಶ್ರೀ.ಯವರು ಇಂಗ್ಲಿಷ್ ಕವಿತೆಗಳನ್ನು ಅನುವಾದಿಸಿದರು. ಇದು ನವೋದಯ ಚಳವಳಿಯ ಆರಂಭ.
ಭಾವಗೀತೆ ಇದರ ಮೊದಲ ಆದ್ಯತೆ. ಪ್ರಕೃತಿ, ಹೂವು, ಹಣ್ಣು, ಹಕ್ಕಿಗಳ ಕುರಿತು ನವಿರಾದ ಭಾವ ಹೊಂದಿದ ಕವಿತೆಗಳನ್ನು ಬರೆಯುವ ಈ ಚಳವಳಿಯು ಸಾಮಾಜಿಕ ಸಮಾನತೆಯನ್ನು ಆಳದ ಉದ್ದೇಶವನ್ನಾಗಿ ಹೊಂದಿತ್ತು. ಮನುಷ್ಯನ ಹಾಗೂ ಸಮಾಜದಲ್ಲಿನ ಓರೆಕೋರೆಗಳನ್ನು ಸಹಜವಾಗಿ ಸ್ವೀಕರಿಸುವ ಗುಣವನ್ನು ನವೋದಯ ಚಳವಳಿ ಕಲಿಸಿತು. ಸಾಮಾನ್ಯ ಜನರೇ ಕಥೆ ಕವನಗಳ ನಾಯಕರಾದರು. ಹೀಗಾಗಿ ಜನರಿಗೆ ಹತ್ತಿರವಾದ, ಹತ್ತಿರವಾಗುವ ಅನುಕೂಲತೆಯನ್ನು ಇದು ಹೊಂದಿತ್ತು. ನಮೋದಯ ಸಾಹಿತ್ಯವು ಸಾಮಾಜಿಕ ಚಿಂತನೆಗಳನ್ನು ರೂಢಿಸಿಕೊಂಡ ಒಂದು ಚಳವಳಿಯಾಗಿ ರೂಪುಗೊಂಡಿತು.
ಪ್ರಗತಿಶೀಲ ಚಳವಳಿ ನವೋದಯದ ಕೊನೆಯಲ್ಲಿ ಪ್ರಾರಂಭವಾದಂತೆ ತೋರುತ್ತದೆ. ನವೋದಯದ ನವಿರುತನ, ಭಾವನೆಗಳ ಉತ್ಪ್ರೇಕ್ಷೆಯನ್ನು ಅಸಹಜ ಎಂದು ಈ ಚಳವಳಿ ಭಾವಿಸಿತು. ದೀನ ದುರ್ಬಲರ, ಕೂಲಿ ಕಾರ್ಮಿಕರ ದನಿಯಾಗಬೇಕೆಂಬ ಕೂಗು ಏಳಲು ಈ ಪ್ರಗತಿಶೀಲ ಚಳವಳಿ ಮುಖ್ಯ ಕಾರಣ. ಇದು ಜನಪರವಾದುದನ್ನು ಬರೆಯುವ ಪಣ ತೊಟ್ಟಂತೆ ಸಾಮಾಜಿಕ ಕೆಳಸ್ತರದವರನ್ನು ನಾಯಕರನ್ನಾಗಿ ಬೂಸ್ಟ್ ಮಾಡಿತು.
ಆದರೆ ಪ್ರಗತಿಶೀಲ ಚಳವಳಿಯ ದೊಡ್ಡ ಹಿನ್ನಡೆಯೆಂದರೆ ಸಮಸ್ಯೆಯನ್ನು ಭಾವನಾತ್ಮಕವಾಗಿ ನೋಡುವುದರ ಹೊರತೂ ವಾಸ್ತವ ನೆಲಗಟ್ಟಿನಿಂದ ನೋಡಲು ವಿಫಲವಾಯಿತು. ಜೊತೆಗೆ ನವೋದಯದ ಗಟ್ಟಿತನ ಅಥವಾ ವಿವೇಚನಾತ್ಮಕತೆ ಇಲ್ಲಿ ಕಾಣುವುದಿಲ್ಲ. ವಿಮರ್ಶೆಯನ್ನು ತಿರಸ್ಕರಿಸುವ ಕಾಲಘಟ್ಟದಲ್ಲಿ ಚಿಕಿತ್ಸಕ ಬರಹಗಳ ಕೊರತೆಯೂ ಕಂಡುಬರುವುದನ್ನು ಗಮನಿಸಬೇಕು.
ಸಣ್ಣ ಕಥೆ ಹಾಗೂ ಕಾದಂಬರಿಗಳು ಈ ಕಾಲದ ಪ್ರಮುಖ ಬೆಳವಣಿಗೆ. ಈ ಗದ್ಯ ಪ್ರಕಾರದ ಬರವಣಿಗೆಯಿಂದ ಒಂದು ವಿಪುಲವಾದ ಓದುಗ ಬಳಗ ಸೃಷ್ಟಿಯಾಯಿತು. ಮಹಿಳಾ ಓದುಗರು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಾದರು. ಅದರಲ್ಲೂ ಗೃಹಿಣಿಯರು, ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಕಥೆ ಕಾದಂಬರಿಗಳ ಓದುಗರಾದರು. ಇದರಿಂದಾಗಿ ಮಹಿಳೆಯರೂ ಈ ಕಾಲಘಟ್ಟದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಇದು ಈ ಪ್ರಗತಿಶೀಲ ಚಳವಳಿಯ ಮುಖ್ಯ ಪ್ರಭಾವ ಎಂದೇ ಹೇಳಬೇಕು. ಸಾಮಾಜಿಕ ಚಿಂತನೆ, ಮಾರ್ಪಾಡನ್ನು ಬಯಸುವ ಯುವಜನತೆ ಸಾಹಿತ್ಯದತ್ತ ಆಕರ್ಷಿತವಾಗಲು ಇದು ಕಾರಣವಾಯಿತು.
ಇಂಗ್ಲೆಂಡ್‌ನಲ್ಲಿನ ಮಹಾಯುದ್ಧದ ನಂತರದ ಸ್ಥಿತಿ ಭಾರತದ ಸ್ವಾತಂತ್ರಾನಂತರ ಉಂಟಾದ್ದರಿಂದ ನವ್ಯ ಚಳವಳಿಯ ಉಗಮಕ್ಕೆ ಕಾಲ ಪಕ್ವವಾಗಿತ್ತು.
ವಿನಾಯಕರ ‘ಸಮುದ್ರಗೀತೆ’ ನವ್ಯಕಾವ್ಯದ ಮೊದಲ ರಚನೆಯಾದರೂ ಇದೇ ಸಂದರ್ಭದಲ್ಲಿ ಅಡಿಗರ ‘ಚಂಡೆಮದ್ದಳೆ’ ಹಾಗೂ ‘ಭೂಮಿಗೀತ’ ಕಾವ್ಯಪ್ರಕಟವಾಗಿ ಅಡಿಗರು ನವ್ಯದ ಆದ್ಯ ಪ್ರವರ್ತಕರೆನಿಸಿಕೊಂಡರು. ಕಾವ್ಯದಲ್ಲಿ ಮಣ್ಣಿನ ವಾಸನೆ, ಸಮಕಾಲೀನ ಪ್ರಜ್ಞೆ, ಆಡುಮಾತಿನ ಲಯ ಮುಂತಾದವು ನವ್ಯಕ್ಕೆ ಹೊಸ ತಿರುವನ್ನು ನೀಡಿತು. ಕೆ.ಎಸ್.ಎನ್., ಜಿ.ಎಸ್.ಎಸ್, ನಿಸಾರ್, ಲಂಕೇಶ್, ಕಂಬಾರ ಮುಂತಾದವರು ಈ ಚಳವಳಿಯ ಭಾಗಗಳಾದರು. ಕಟ್ಟುವೆವು ನಾವು ಹೊಸ ನಾಡೊಂದನ್ನು ಕಲೆಯ ಬೀಡೊಂದನ್ನು ಎನ್ನುತ್ತ ನವ್ಯ ಮುಂಚೂಣಿಗೆ ಬಂತು.
ಸ್ವಾತಂತ್ರ್ಯದ ನಂತರದ ಜೀವನ, ಮನುಷ್ಯರ ಸ್ವಾರ್ಥ ಹಾಗೂ ಪೊಳ್ಳುತನಗಳೆಲ್ಲವೂ ನವ್ಯಕ್ಕೆ ವಿಷಯಗಳಾದವು. ರೂಪಕಗಳ ಹಾಗೂ ಪ್ರತಿಮೆಗಳ ಮೂಲಕ ವಿಷಯವನ್ನು ಪ್ರಸ್ತಾಪಿಸುವ ಆಚರಣೆ ಒಂದು ರೀತಿಯಲ್ಲಿ ಅನುಕೂಲವೇ ಆಗಿತ್ತು.
ಎಪ್ಪತ್ತರ ದಶಕದಲ್ಲಿ ನವ್ಯ ಸಾಹಿತ್ಯ ಮತ್ತೊಂದು ಮಜಲನ್ನು ತಲುಪಿತು. ಅದನ್ನು ಪರಿವರ್ತನೆಶೀಲ ಎಂದು ಗುರುತಿಸಲಾಗಿದೆ. ವ್ಯಕ್ತಿ ಕೇಂದ್ರಿತವಾಗಿದ್ದ ನವ್ಯ ಸಾಹಿತ್ಯವನ್ನು ಸಾಮಾಜಿಕವಾಗಿ ಮಾಡುವ ಈ ಚಳವಳಿಯ ಮುಂಚೂಣಿಯಲ್ಲಿದ್ದವರು ತೇಜಸ್ವಿ, ಲಂಕೇಶ್, ಚಿತ್ತಾಲ ಮೊದಲಾದವರು.
ನವ್ಯದ ವೈಯಕ್ತಿಕ ಹಾಗೂ ಸಾಮಾಜಿಕ ತೆರೆದುಕೊಳ್ಳುವಿಕೆ ಸಮಾಜದ ಪಟ್ಟಭದ್ರ ಹಿತಾಸಕ್ತಿಯ ವಿರುದ್ಧ ಬಂಡೇಳುವಂತೆ ಬರೆದ ಚಳವಳಿ ಬಂಡಾಯ ಸಾಹಿತ್ಯ. ಶೂದ್ರ ಹಾಗೂ ಕೆಳವರ್ಗದವರ ಪ್ರತಿಭಟನೆಯನ್ನು ದಾಖಲಿಸುವ ಈ ಚಳವಳಿ ಜನಪರವಾಗಿ ಮುಂದುವರಿಯಿತು. ಪ್ರಭುತ್ವದ ವಿರುದ್ಧವಾದ ಭಾವನೆ ಹೊರಹಾಕುವ ಹಾಗೂ ಶೋಷಿತರ ಪರವಾದ ನಿಲುವು ಹೊಂದಿರುವ ಸಾಹಿತ್ಯವೇ ಬಂಡಾಯ ಸಾಹಿತ್ಯ. ಚಳವಳಿ. ಬಂಡಾಯ ದಲಿತ ಸಾಹಿತಿಗಳಿಂದ ದಾಖಲಾಗಿ ಅದು ದಲಿತ ಸಾಹಿತ್ಯ ಚಳವಳಿ ಎನ್ನಿಸಿಕೊಂಡಿತು.
ವಚನ ಚಳವಳಿಯ ನಂತರ ಅಸಂಖ್ಯಾತ ದಲಿತ ಶೂದ್ರ ಸಮುದಾಯ ಬರವಣಿಗೆಯಲ್ಲಿ ತೊಡಗಿಕೊಂಡಿರುವುದು ಈ ಸಂದರ್ಭದಲ್ಲಿ ಮಾತ್ರ ಎನ್ನಬಹುದು. ಈ ಸಾಹಿತ್ಯ ಪುರೋಹಿತಶಾಹಿ, ಬಂಡವಾಳಶಾಹಿ, ವಸಾಹತುಶಾಹಿಗೆ ವಿರೋಧಿಯಾಗಿ ಮುನ್ನೆಲೆಗೆ ಬಂದ ಚಳವಳಿ. ಇದು ಕೆಳವರ್ಗದವರನ್ನು ಹಾಗೂ ದಲಿತರನ್ನು ಸಾಹಿತ್ಯದ ಕಡೆ ಸೆಳೆಯಿತು. ಕಾವ್ಯದ ಪೂರ್ವ ನಿರ್ಧಾರಿತ ಎಲ್ಲ ಕಟ್ಟುಪಾಡುಗಳನ್ನು ಮುರಿದು ಬರೆಯಲು ಇದು ಪ್ರೇರಣೆಯಾಯಿತು.ಅಲ್ಲಿಯವರೆಗೆ ಅದುಮಲ್ಪಟ್ಟು ಹಿನ್ನೆಲೆಗೆ ಸರಿದಿದ್ದ ದಲಿತರ ಸಂಕಷ್ಟಗಳು, ನೋವು ನಿರಾಸೆಗಳು ಒಮ್ಮೆಲೆ ಸ್ಫೋಟಗೊಳ್ಳಲು ಇದು ಕಾರಣವಾಯಿತು. ಮಹಿಳಾವಾದಿ ಚಳವಳಿ ಪಾಶ್ಚಾತ್ಯದ ಕೊಡುಗೆ ಎಂದು ಭಾವಿಸಿದವರಿದ್ದಾರೆ. ಸ್ತ್ರೀವಾದಿಗಳೆಂದರೆ ಮೂಗು ಮುರಿಯುವ ಸಮಾಜದಲ್ಲಿ ಮಹಿಳಾ ಕಥಾನಕಗಳನ್ನು ನಿರೂಪಿಸುವುದು ಸುಲಭವಾಗಿರಲಿಲ್ಲ. ಮಹಿಳೆಯರು ಬರೆದದ್ದನ್ನು ಅಡುಗೆಮನೆ ಸಾಹಿತ್ಯ ಎಂದು ಹೀಗಳೆವವರ ನಡುವೆ ಸ್ತ್ರೀವಾದಿ ಸಾಹಿತ್ಯ ಚಳವಳಿಯನ್ನು ಕಟ್ಟುವುದೆಂದರೆ ಹಿಮಾಲಯವೇರಿದಂತಾದ ಸಂದರ್ಭದಲ್ಲಿ ನಾಜೂಕಾಗಿ ಪುರುಷಾಹಂಕಾರಕ್ಕೆ ಢೀ ಕೊಡುವ ಕೆಲಸ ಈ ಚಳವಳಿಯಲ್ಲಾಯಿತು. ಇತ್ತೀಚಿನ ದಿನಗಳಲ್ಲಿ ಬರೆಯುತ್ತಿರುವ ಯುವ ಪ್ರತಿಭೆಗಳು ಈ ಮಾತನ್ನು ಸತ್ಯಗೊಳಿಸಿವೆ.
ಮುಸ್ಲಿಮ್ ಸಾಹಿತ್ಯ ಚಳವಳಿ ಇದೇ ಸಮಯದಲ್ಲಿ ಮುನ್ನೆಲೆಗೆ ಬಂದ ಚಳವಳಿ. ಮಹಮದ್ ಕುಂಞಿ, ಫಕೀರ್ ಮುಹಮ್ಮದ್ ಕಟ್ಪಾಡಿ ಮೊದಲಾದವರು ಬರೆಯಲಾರಂಭಿಸಿದ ಕಾಲದಲ್ಲಿ ಜನ ಅಚ್ಚರಿಯಿಂದ ಈ ಹೊಸಲೋಕವನ್ನು ಗಮನಿಸಲಾರಂಭಿಸಿದರು. ಮುಸ್ಲಿಮ್ ಸಮಾಜದ ಹಲವಾರು ತಲ್ಲಣಗಳು ಇಲ್ಲಿ ಕಥೆ ಕವನ ಗಳಾದವು. ಇತ್ತೀಚೆಗೆ ಬರೆಯುತ್ತಿರುವ ಯುವ ಸಾಹಿತಿಗಳವರೆಗೂ ಈ ಸಾಹಿತ್ಯ ವ್ಯಾಪಿಸಿದೆ
ಈ ಹೊತ್ತಿಗೆ ಮುಸ್ಲಿಮ್ ಮಹಿಳೆಯರೂ ಬರೆಯಲಾರಂಭಿಸಿದರು. ಸಾರಾ ಅಬೂಬಕರ್‌ರಿಂದ ತೊಡಗಿ ಇತ್ತೀಚಿನ ಹಲವು ಮುಸ್ಲಿಮ್ ಮಹಿಳಾ ಬರಹಗಾರರು ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
ಕನ್ನಡ ಸಾಹಿತ್ಯ ಈಗ ಯಾವ ಚಳವಳಿಯ ಅಬ್ಬರವಿಲ್ಲದೆ ಧ್ಯಾನಸ್ಥಿತಿಯಲ್ಲಿರುವಂತೆ ತೋರುತ್ತಿದೆಯಾದರೂ ಯುವ ಜನತೆ ಕಾರ್ಪೊರೇಟ್ ಜಗತ್ತಿನ ಅನಾವರಣದಲ್ಲಿ ತೊಡಗಿಕೊಂಡಿದೆ. ಹೊಸತನಗಳಿಗೆ ತೆರೆದುಕೊಳ್ಳುತ್ತ ಜಾಗತೀಕರಣ, ಉದಾರೀಕರಣ, ಆಧುನೀಕರಣವನ್ನು ಮೈಗೂಡಿಸಿಕೊಳ್ಳುತ್ತ ಮುಂದುವರಿದಿರುವುದು ಸಮಾಧಾನದ ವಿಷಯವೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಕೇವಲ ಕನ್ನಡ ಸಾಹಿತ್ಯದ ಓದುಗರು ಮಾತ್ರವಲ್ಲದೆ ಸಮಾಜದ ಎಲ್ಲ ವೃತ್ತಿಯವರೂ ಸಾಹಿತ್ಯ ರಚನೆಯಲ್ಲಿ ತೊಡಗಿರುವುದರಿಂದ ಬಹಳಷ್ಟು ಹೊಸ ವಿಷಯಗಳಿಗೆ ಸಾಹಿತ್ಯ ಲೋಕವಷ್ಟೇ ಅಲ್ಲ ಓದುಗರೂ ತೆರೆದುಕೊಳ್ಳುತ್ತಿದ್ದಾರೆ. ಅಭಿಯಂತರರು, ವೈದ್ಯರು, ಆರಕ್ಷಕರು ಎಲ್ಲರೂ ಸೇರಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿರುವುದನ್ನು ನೋಡುವುದೇ ಒಂದು ಖುಷಿ.







