ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ: ಹಲವರು ವಶಕ್ಕೆ

ಕಲಬುರಗಿ: ತೆಲಂಗಾಣ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡಬೇಕೆಂದು ಪ್ರತ್ಯೇಕ ಧ್ವಜಾರೋಹಣ ಮಾಡಲು ಯತ್ನಿಸಿದ 'ಪ್ರತ್ಯೇಕ ರಾಜ್ಯ ಹೋರಾಟ' ಸಮಿತಿ ಕಾರ್ಯಕರ್ತರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದರು.
ಮಾಜಿ ಸಚಿವ ದಿವಂಗತ ಉಮೇಶ್ ಕತ್ತಿ ಹಾಗೂ ವೈಜನಾಥ್ ಪಾಟೀಲ್ ಅವರ ಭಾವಚಿತ್ರ ಮತ್ತು ಪ್ರತ್ಯೇಕ ರಾಜ್ಯದ ಧ್ವಜ ಹಿಡಿದು ಎಂ.ಎಸ್ ಪಾಟೀಲ್ ನರಿಬೋಳ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನಾಕಾರರು ನಗರದ ಕೋರ್ಟ್ ಮಾರ್ಗವಾಗಿ ಪಟೇಲ್ ವೃತ್ತಕ್ಕೆ ಧ್ವಜಾರೋಹಣ ಮಾಡಲು ಆಗಮಿಸುತ್ತಿದ್ದಂತೆಯೇ ಮಾರ್ಗಮಧ್ಯೆ ಪೊಲೀಸರು ವಶಕ್ಕೆ ಪಡೆದುಕೊಂಡರು.
'' ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಿಸಲಿಟ್ಟ ಹಣ ಪಕ್ಕದ ಜಿಲ್ಲೆಗಳಿಗೆ ಬಳಕೆ ಮಾಡಲಾಗ್ತಿದೆ. ಉದ್ಯೊಗ ನೇಮಕಾತಿ, ಮಿಸಲಾತಿ, ಮುಂಬಡ್ತಿ ವಿಷಯದಲ್ಲಿ ಕಡೆಗಣನೆ ಮಾಡಲಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪ್ರದಾನದಲ್ಲಿಯೂ ಈಭಾಗಕ್ಕೆ ಅನ್ಯಾಯವಾಗಿದೆ'' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
''ಪದೇ ಪದೇ ಈ ಭಾಗಕ್ಕೆ ರಾಜ್ಯ ಸರ್ಕಾರ ದ್ರೊಹ ಬಗೆಯುತ್ತಿದೆ. ನಮ್ಮ ಭಾಗದ ಸಮಗ್ರ ಅಭಿವೃದ್ಧಿಗಾಗಿ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ನೀಡಬೇಕು ಎಂದು'' ಹೋರಾಟಗಾರರು ಆಗ್ರಹಿಸಿದರು.









