ಕೊನೆಗೂ ‘ಅಕ್ಷರ ಸಂತ ಹಾಜಬ್ಬ’ರಿಗೆ ಪಿಯು ಕಾಲೇಜು ಮಂಜೂರು

ಮಂಗಳೂರು, ನ.1: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಕೊನೆಗೂ ರಾಜ್ಯ ಸರಕಾರ ಪಿಯು ಕಾಲೇಜು ಮಂಜೂರುಗೊಳಿಸಿ ಆದೇಶ ಹೊರಡಿಸಿದೆ.
ಹಲವು ವರ್ಷಗಳಿಂದ ಹಾಜಬ್ಬ ಪಿಯು ಕಾಲೇಜಿಗಾಗಿ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿಗಳನ್ನು ಸಲ್ಲಿಸುತ್ತಲಿದ್ದರು. ಪದ್ಮಶ್ರೀ ಪುರಸ್ಕೃತರಾದ ಅವರ ಬೇಡಿಕೆಗೆ ಹೆಚ್ಚಿನ ಮನ್ನಣೆ ಸಿಕ್ಕಿತ್ತು. ಇದೀಗ ‘ಕರ್ನಾಟಕ ರಾಜ್ಯೋತ್ಸವ’ದ ಉಡುಗೊರೆ ಎಂಬಂತೆ ಪಿಯು ಕಾಲೇಜು ಮಂಜೂರುಗೊಳಿಸಲಾಗಿದೆ.
ಸುಮಾರು 30 ವರ್ಷದ ಹಿಂದೆಯೇ ನಗರದ ಬೀದಿಬದಿಗಳಲ್ಲಿ ತಲೆ ಮೇಲೆ ಬುಟ್ಟಿಯಲ್ಲಿ ಕಿತ್ತಳೆ ಹಣ್ಣುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಹರೇಕಳ ಹಾಜಬ್ಬ ತನ್ನೂರು ನ್ಯೂಪಡ್ಪುಗೆ ಸರಕಾರಿ ಶಾಲೆ ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅಂದರೆ 1999-2000ರ ಸಾಲಿಗೆ ನ್ಯೂಪಡ್ಪುಗೆ ಪ್ರಾಥಮಿಕ ಶಾಲೆ ಮಂಜೂರಾಗಿತ್ತು. ಬಳಿಕ ಹಾಜಬ್ಬರು ಶಾಲೆಯನ್ನು ಅಭಿವೃದ್ಧಿಪಡಿಸುತ್ತಲೇ ಮುನ್ನೆಡೆದರು. ಹಾಗೇ ಪ್ರೌಢಶಾಲೆ ಮಂಜೂರಾಯಿತು. ಜೊತೆಗೆ ಅನೇಕ ಪ್ರಶಸ್ತಿ, ಸನ್ಮಾನಕ್ಕೆ ಭಾಜನರಾದರು.
ಪ್ರೌಢಶಾಲೆ ಮಂಜೂರಾದ ಕೆಲವು ವರ್ಷದ ಬಳಿಕ ಸರಕಾರಿ ಪಿಯು ಕಾಲೇಜು ಸ್ಥಾಪನೆಗೆ ಪಟ್ಟು ಹಿಡಿದರು. ಆರಂಭದಲ್ಲಿ ಪಿಯು ಕಾಲೇಜು ಗಗನ ಕುಸುಮ ಎಂಬಂತೆ ಕಂಡು ಬಂದರೂ ಹಾಜಬ್ಬರು ಧೃತಿಗೆಡಲಿಲ್ಲ. ವೈಯಕ್ತಿಕ ಬದುಕಿನಲ್ಲಿ ಸೋತು ಜರ್ಜರಿತಗೊಂಡಿದ್ದರೂ ಕಾಲೇಜು ಕನಸಾಗಿಸಲು ಪ್ರಯತ್ನಿಸುತ್ತಲೇ ಇದ್ದರು. ಅದರಂತೆ ಇದೀಗ ಪಿಯು ಕಾಲೇಜು ಸ್ಥಾಪನೆಗೆ ಸರಕಾರ ಮಂಜೂರಾತಿ ನೀಡಿದೆ.
"ನಮ್ಮೂರಿಗೆ ಪಿಯು ಕಾಲೇಜನ್ನು ಮಂಜೂರು ಮಾಡಿಸಬೇಕು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದೆ. ಇದೀಗ ಪ್ರಯತ್ನ ಫಲ ನೀಡಿದೆ. ಕಾಲೇಜನ್ನು ಮಂಜೂರುಗೊಳಿಸಿದ ಅಧಿಕಾರಿಗಳು, ಪ್ರಯತ್ನಿಸಿದ ಅಧಿಕಾರಿ ಸಿಬ್ಬಂದಿ ವರ್ಗಕ್ಕೆ ನಾನು ವಿಶೇಷ ಅಭಾರಿಯಾಗಿದ್ದೇನೆ" ಎಂದು ಹರೇಕಲ ಹಾಜಬ್ಬ ತಿಳಿಸಿದ್ದಾರೆ.







