ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ

ಉಡುಪಿ, ನ.1: ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರಿಸ್ ಹೂಡೆ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಬುಕಳದ ಚೇತನಾ ಪ್ರೌಢ ಶಾಲೆಯ ಕಾರ್ಯದರ್ಶಿ, ಸಮಾಜ ಸೇವಕ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಕನ್ನಡ ಸಾಹಿತ್ಯಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಭಾಷೆಗಳು ನಮ್ಮಲ್ಲಿ ಸಾಮರಸ್ಯವನ್ನು ತರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ ಇವರನ್ನು ಸನ್ಮಾನಿಸ ಲಾಯಿತು. ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಸಬೀನಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದಿವ್ಯಾ ಪೈ, ಅರೇಬಿಕ್ ಕಾಲೇಜಿನ ಪ್ರಾಂಶುಪಾಲೆ ಕುಲ್ಸುಮ್ ಅಬೂಬಕರ್, ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯಸ್ಥರುಗಳಾದ ಸುನಂದ, ತಸ್ಮಿಯಾ, ಶಾದತ್ ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ಷಾಝ್ಝೂಹ ಪ್ರಾರ್ಥಿಸಿದರು. ಸಫಾ ಅಲ್ಹಾನ್ಸಾ ಸ್ವಾಗತಿಸಿ, ಬೆನಝೀರ್ ಸುಲ್ತಾನ್ ವಂದಿಸಿದರು. ತಸ್ಫಿಯಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ, ಶಿಕ್ಷಕ ವರ್ಗದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.





