ಕನ್ನಡ ಪರಂಪರೆಯ ನಿಜ ಅರಿವು ಪಡೆದಾಗ ಸ್ವಾಭಿಮಾನಿಗಳಾಗಲು ಸಾಧ್ಯ: ಸಚಿವ ಎಸ್.ಅಂಗಾರ
ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ

ಉಡುಪಿ, ನ.1: ಕನ್ನಡದ ಜನ ತಮ್ಮ ಪರಂಪರೆಯ ನಿಜವಾದ ಅರಿವನ್ನು ಪಡೆದಾಗ ಅವರ ಕೀಳರಿಮೆ ತೊಲಗಿ ಅವರು ಸ್ವಾಭಿಮಾನಿಗಳಾಗಲು ಸಾಧ್ಯ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಪಥಸಂಚಲನದಲ್ಲಿ ಗೌರವರಕ್ಷೆ ಸ್ವೀಕರಿಸಿದ ಬಳಿಕ ಕನ್ನಡ ರಾಜ್ಯೋತ್ಸವ ಸಂದೇಶ ನೀಡುತಿದ್ದರು.
ಇಂದು ಅಗತ್ಯವಾಗಿರುವುದು ಒಗ್ಗಟ್ಟು. ಒಕ್ಕಲಿಗ, ಲಿಂಗಾಯತ, ಬೇಡ, ಕುರುಬ, ಬ್ರಾಹ್ಮಣ, ದಲಿತ, ಮುಸಲ್ಮಾನ, ಕ್ರಿಶ್ಚಿಯನ್ ಎಂಬ ಭೇದವಿಲ್ಲದೇ ಎಲ್ಲಾ ಕನ್ನಡದ ಜನ ಕನ್ನಡದ ಉಳಿವು ಬೆಳವಣಿಗಾಗಿ ಒಂದಾಗುವುದು ತೀರ ಅಗತ್ಯ. ನಮ್ಮ ನಾಡು ನುಡಿಯ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಸರಕಾರವೂ ಕಾಲಕಾಲಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದವರು ತಿಳಿಸಿದರು.
ಪ್ರತಿಯೊಂದು ಹಂತದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವುದು, ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುವುದು, ಕನ್ನಡ ಸಾಹಿತ್ಯ ಶ್ರೀಮಂತಿಕೆ ಯನ್ನು ಗುರುತಿಸಿ ಗೌರವಿಸುವುದು, ಸಿನೆಮಾ, ಮನೋರಂಜನೆ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದವರು ಕರೆ ನೀಡಿದರು.
ಕನ್ನಡ ರಾಜ್ಯ ಏಕೀಕರಣದ ಸಂದರ್ಭದಲ್ಲಿ ವಿವಿಧ ಪ್ರಾತಂಗಳಲ್ಲಿ ಚದುರಿ ಹೋಗಿದ್ದ ಕನ್ನಡಿಗರು ತೋರಿದ ಸಹಮತ ಮತ್ತು ಸಹಬಾಳ್ವೆ ನವ ಕರ್ನಾಟಕ ರಾಜ್ಯ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ರಾಜ್ಯದ ಪ್ರಗತಿಗೆ ಎಲ್ಲಾ ಜನರು ಜಾತಿ, ಧರ್ಮ, ಬೇಧಭಾವ ಬಿಟ್ಟು ಸರ್ವ ಸಹಕಾರ ಹಾಗೂ ಸಮನ್ವಯತೆ ಯಿಂದ ಕೆಲಸ ಮಾಡುವುದು ಅಗತ್ಯವಾಗಿದೆ ಎಂದರು.
ಇಂದು ಅಕ್ಷರಸ್ಥ ಕನ್ನಡಿಗರಿಗೆ ಕರ್ನಾಟಕದ ಪರಂಪರೆಯನ್ನು ತಿಳಿಯುವ ಹಸಿವು ಹೆಚ್ಚುತ್ತಿದೆ. ಈ ಹೆಮ್ಮೆ ಅವರನ್ನು ಮುಂದಿನ ಭವಿಷ್ಯದತ್ತ ಉತ್ಸಾಹದಿಂದ ಹೆಜ್ಜೆಹಾಕಲು ಸ್ಪೂರ್ತಿ ನೀಡುತ್ತಿದೆ. ನಾಡಿನಲ್ಲಿ ಬೌದ್ಧ, ಜೈನ, ಶೈವ, ವೈಷ್ಣವ ಮತಗಳಲ್ಲದೇ ಇನ್ನೂ ಹಲವು ಪಂಥಗಳು, ಜಾತಿಗಳು ಕರ್ನಾಟಕದಲ್ಲಿ ಶಾಂತಿ ಸೌಹಾರ್ದಗಳಿಂದ ಬಾಳಿ ಸಮನ್ವಯ ಸಾಧಿಸಿವೆ ಎಂದು ಅವರು ವಿವರಿಸಿದರು.
2008ರಲ್ಲಿ ಕನ್ನಡಿಗರ ಒತ್ತಾಸೆಯಂತೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಪಡೆದ ಸಂಭ್ರಮ ನಮ್ಮ ಭಾಷೆಗಿದೆ. ಭಾರತದಲ್ಲಿ ಶಾಸ್ತ್ರೀಯ ಭಾಷೆಯ ಗೌರವ ಪಡೆದ ಆರು ಭಾಷೆಗಳಲ್ಲಿ ಕನ್ನಡ ಮೂರನೇಯದ್ದು ಎಂದು ನಾವು ಅಭಿಮಾನ ದಿಂದ ಹೇಳಬೇಕಿದೆ ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ .ನ ಅಧ್ಯಕ್ಷ ಉಡುಪಿಯ ಕುಮಾರ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ಉಡುಪಿ ನಗರಸಭಾ ಅಧ್ಯಕ್ಷ ಸುಮಿತ್ರಾ ಆರ್.ನಾಯಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ಮಚ್ಚಿಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉಪಸ್ಥಿತರಿದ್ದರು.
ಜಿಲ್ಲೆಯ ಒಟ್ಟು 34 ಮಂದಿ ಸಾಧಕರಿಗೆ ಹಾಗೂ ಎರಡು ಸಂಸ್ಥೆಗಳಿಗೆ ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡು ಮೈದಾನದವರೆಗೆ ವಿವಿಧ ಸ್ಥಬ್ಥ ಚಿತ್ರಗಳ ಮೆರವಣಿಗೆ ನಡೆಯಿತು. ಸಚಿವ ಅಂಗಾರ ಕನ್ನಡ ತಾಯಿ ಭುವನೇಶ್ವರಿ ಚಿತ್ರಕ್ಕೆ ಪೂಜೆ ನೆರವೇರಿಸಿ ಮೆರವಣಿಗೆಗೆ ಹಸಿರು ನಿಶಾನೆ ತೋರಿಸಿದ್ದರು.
ಉಡುಪಿಯ ನಾಲ್ಕು ಶಾಲೆಗಳ ನೂರಾರು ವಿದ್ಯಾರ್ಥಿಗಳಿಂದ ಕನ್ನಡ ಭಾಷೆ, ಕರ್ನಾಟಕದ ಕುರಿತು ಹಾಜು-ನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು.












