ಚಿಕ್ಕಮಗಳೂರು | ಕಾರ್ಮಿಕರ ಮೇಲೆ ದೌರ್ಜನ್ಯ ಪ್ರಕರಣ: ಅಹೋರಾತ್ರಿ ಧರಣಿ ನಡೆಸುತ್ತಿದ್ದವರ ಬಂಧನ
ಆಕ್ರೋಶಿತರಿಂದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಘೆರಾವ್

ಚಿಕ್ಕಮಗಳೂರು, ನ.1: ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿ ದಲಿತ ಯುವತಿಯ ಗರ್ಭಪಾತಕ್ಕೆ ಕಾರಣವಾಗಿದ್ದ ಕಾಫಿ ಎಸ್ಟೇಟ್ ಮಾಲಕ ಹಾಗೂ ಆತನ ಮಗನ ಬಂಧನಕ್ಕೆ ಆಗ್ರಹಿಸಿ ನಗರದ ಆಝಾದ್‍ಪಾರ್ಕ್ ವೃತ್ತದಲ್ಲಿ ಕಳೆದ 6 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರನ್ನು ಮಂಗಳವಾರ ಪೊಲೀಸರು ಬಂಧಿಸಿದ ಘಟನೆ ನಡೆಯಿತು.
ಈ ಘಟನೆ ಖಂಡಿಸಿ ಜಿಲ್ಲಾ ಆಟದ ಮೈದಾನದಲ್ಲಿ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ದಲಿತ ಮುಖಂಡರನ್ನೂ ಪೊಲೀಸರು ಬಂಧಿಸಿದ್ದು, ಸಂಘಟನೆಗಳ ಮುಖಂಡರು ಎಸ್ಪಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಬಂಧಿತರನ್ನು ಪೊಲೀಸರು ಬಿಡುಗಡೆ ಮಾಡಿದರು ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ದಲಿತ ಪರ ಸಂಘಟನೆಗಳು ಬಾಳೆಹೊನ್ನೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು 15 ದಿನಗಳೊಳಗೆ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಆರೋಪಿಗಳ ಬಂಧನಕ್ಕಾಗಿ ಮೂವರು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದರು. ಆದರೆ 20 ದಿನ ಕಳೆದರೂ ಆರೋಪಿಗಳನ್ನು ಪೊಲೀಸರು ಬಂಧಿಸದ ಹಿನ್ನೆಲೆಯಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕಳೆದ ಅ.26ರಂದು ಅಹೋರಾತ್ರಿ ಧರಣಿ ಆರಂಭಿಸಿದ್ದರು.
ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಘೆರಾವ್ ಹಾಕುವ ಭೀತಿಯಿಂದ ಧರಣಿ ನಿರತರ ಬಂಧನ: ಸಂಘಟನೆಗಳ ಧರಣಿಗೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ಜನಪ್ರತಿನಿಧಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ನ.1ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೆರಾವ್ ಹಾಕುವ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದ ಸಂದರ್ಭ ಧರಣಿ ನಿರತರು ಘೆರಾವ್ ಹಾಕುವ ಭೀತಿಯಿಂದಾಗಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಬೆಳಗ್ಗೆ ಆಜಾದ್ ಪಾರ್ಕ್ ವೃತ್ತದಲ್ಲಿ ಧರಣಿ ನಡೆಸುತ್ತಿದ್ದ ದಲಿತ, ಪ್ರಗತಿಪರ ಸಂಘಟನೆಗಳ ಶ್ರೀನಿವಾಸ್, ಅಂಗಡಿಚಂದ್ರು, ಸಂತೋಷ್, ರಮೇಶ್ ಸೇರಿದಂತೆ ಹಲವು ಮುಖಂಡರನ್ನು ಬಂಧಿಸಿದರು.
ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಘೆರಾವ್: ಆಝಾದ್ ಪಾರ್ಕ್ ವೃತ್ತದಲ್ಲಿ ಧರಣಿ ಮಾಡುತ್ತಿದ್ದ ಮುಖಂಡರನ್ನು ಪೊಲೀಸರು ಬಂಧಿಸಿದ್ದರಿಂದ ಕೆರಳಿದ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರ ಮತ್ತೊಂದು ತಂಡ ಭೀರ್ಮ್ ಸಂಘಟನೆಯ ಮುಖಂಡ ಹೊನ್ನೇಶ್ ನೇತೃತ್ವದಲ್ಲಿ ಜಿಲ್ಲಾ ಆಟದ ಮೈದಾನದಲ್ಲಿ ನಡೆಯುತ್ತಿದ್ದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಘೆರಾವ್ ಹಾಕಲು ಮುಂದಾದರು. ಈ ವೇಳೆ ಸ್ಥಳದಲ್ಲಿ ಪೊಲೀಸರು ಮುಖಂಡರನ್ನು ತಡೆದ ಪರಿಣಾಮ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಸಕ ಸಿ.ಟಿ.ರವಿ. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸೇರಿದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಎಲ್ಲ ಮುಖಂಡರನ್ನು ಬಂದಿಸಿ ಠಾಣೆಗೆ ಕರೆದೊಯ್ದರು. ಈ ವೇಳೆ ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಎಸ್ಪಿಯೊಂದಿಗೆ ಮುಖಂಡರ ಮಾತುಕತೆ; ಬಂಧಿತರ ಬಿಡುಗಡೆ: ಎಸ್ಪಿ ಧರಣಿನಿರತರ ಭೇಟಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಧರಣಿ ನಿರತರು ಎಸ್ಪಿ ಕಚೇರಿಗೆ ಬಳಿ ತೆರಳಿ ಮನವಿ ಸಲ್ಲಿಸಲು ಮುಂದಾದರು. ಈ ವೇಳೆ ಮುಖಂಡರನ್ನು ಕಚೇರಿಗೆ ಕರೆಸಿಕೊಂಡ ಎಸ್ಪಿ ಉಮಾ ಪ್ರಶಾಂತ್, ಮುಖಂಡರೊಂದಿಗೆ ಕೆಲ ಹೊತ್ತು ಚರ್ಚೆ ನಡೆಸಿದರು. ಈ ವೇಳೆ ಮುಖಂಡರು, ಆರೋಪಿಗಳನ್ನು ಶೀಘ್ರ ಬಂಧಿಸಬೇಕು, ಧರಣಿ ನಿರತರನ್ನು ಬಿಡುಗಡೆ ಮಾಡಬೇಕು. ನೊಂದ ಸಂತ್ರಸ್ಥರಿಗೆ ನಿವೇಶನ, ಮನೆ ಸೌಲಭ್ಯ ನೀಡಬೇಕು, ಸಂತ್ರಸ್ಥರ ವಿರುದ್ಧ ಎಸ್ಟೇಟ್ ಮಾಲಕರು ನೀಡಿರುವ ಸುಳ್ಳು ದೂರನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಉಮಾಪ್ರಶಾಂತ್, ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಮೂರು ತಂಡ ಕಾರ್ಯನಿರ್ವಹಿಸುತ್ತಿದೆ. ಆರೋಪಿಗಳನ್ನು ಬಂಧಿಸಿಯೇ ತೀರುತ್ತೇವೆ, ಆರೋಪಿಗಳು ದಲಿತ ಸಂತ್ರಸ್ಥರ ವಿರುದ್ಧ ನೀಡಿರುವ ದೂರು ಮೇಲ್ನೋಟಕ್ಕೆ ಸುಳ್ಳೆಂದು ತಿಳಿದು ಬಂದಿದ್ದು, ಈ ಸಂಬಂಧ ಯಾವುದೇ ತನಿಖೆ ನಡೆಸುತ್ತಿಲ್ಲ. ಇನ್ನು ಸಂತ್ರಸ್ಥರಿಗೆ ನಿವೇಶನ, ಮನೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದರು. ಎಸ್ಪಿಯೊಂದಿಗೆ ಮುಖಂಡರು ಮಾತುಕತೆ ನಡೆಸಿದ ಕೆಲವೆ ಹೊತ್ತಿನಲ್ಲಿ ಪೊಲೀಸರು ಬಂದಿಸಿದ್ದ ಎಲ್ಲ ದಲಿತ ಮುಖಂಡರನ್ನು ಬಿಡುಗಡೆ ಮಾಡಲಾಯಿತು.






.jpg)

