ಬಿಜೆಪಿ ಸದಾ ಚುನಾವಣೆಗೆ ಸಿದ್ಧವಾಗಿಯೇ ಇರುತ್ತದೆ: ಸಚಿವ ಅಂಗಾರ
‘2-3 ದಿನಗಳಲ್ಲಿ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ’

ಉಡುಪಿ, ನ.1: ಭಾರತೀಯ ಜನತಾ ಪಕ್ಷ ಚುನಾವಣೆಗೆ ಸಿದ್ದರಾಗಿಯೇ ಇರುತ್ತೇವೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಇಂದು ನಡೆದ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ನಮ್ಮ ಸರಕಾರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತನ್ನು ಕೊಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಮತ್ತು ವಿವರಿಸುವ ಕೆಲಸವನ್ನು ನಾವೀಗ ಮಾಡುತ್ತಿದ್ದೇವೆ ಎಂದರು.
ಕಳೆದ ಮೂರು ತಿಂಗಳುಗಳಿಂದ ಸೀಮೆಎಣ್ಣೆ ಸಿಗದೇ ನಾಡದೋಣಿ ಮೀನುಗಾರರು ಕಂಗಾಲಾಗಿದ್ದು ಪ್ರತಿಭಟನೆಗೆ ಮುಂದಾಗುತ್ತಿರುವ ಕುರಿತು ಸಚಿವರನ್ನು ಪ್ರಶ್ನಿಸಿದಾಗ, ಇನ್ನು ಎರಡು- ಮೂರು ದಿನಗಳ ಒಳಗೆ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆಯನ್ನು ಮಾಡುತ್ತೇವೆ. ಕೇಂದ್ರ ಸರಕಾರ ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ಸೀಮೆಎಣ್ಣೆಯ ಬಳಕೆ ನಿಲ್ಲಿಸಲು ಮುಂದಾಗಿದೆ. ಹೀಗಾಗಿ ಮೀನುಗಾರರಿಗೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಇಂಜಿನ್ ಪೂರೈಕೆ ಮಾಡುತ್ತೇವೆ ಎಂದರು.
ಈ ಸಮಸ್ಯೆ ಇಂದು-ನಿನ್ನೆಯ ಸಮಸ್ಯೆಯಲ್ಲ. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಸದ್ಯ ಮೀನುಗಾರರು ಎದುರಿಸುತ್ತಿರುವ ಸಮಸ್ಯೆ ಇನ್ನು ಎರಡು-ಮೂರು ದಿನಗಳಲ್ಲಿ ಪರಿಹಾರ ಕಾಣಲಿದೆ. ಪರಿಸರ ಮಾಲಿನ್ಯ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ನಾಡದೋಣಿ ಮೀನುಗಾರಿಕೆಗೆ ಇನ್ನು ಮುಂದೆ ಮೀನುಗಾರರು ಪೆಟ್ರೋಲ್ ಇಂಜಿನ್ ಬಳಸಬೇಕು. ಇದನ್ನು ಪೂರೈಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ತಾತ್ಕಾಲಿಕವಾಗಿ ಆಗಿರುವ ಸಮಸ್ಯೆಯನ್ನು ಕೂಡಲೇ ಪರಿಹರಿ ಸುತ್ತೇವೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಇಂಜಿನ್ ಬಳಕೆಯನ್ನು ಹೆಚ್ಚು ಮಾಡುತ್ತೇವೆ ಎಂದರು.
ಹೂಳು ಸಮಸ್ಯೆಗೆ ಪರಿಹಾರ: ನಾಲ್ಕು ಕಡೆಗಳಲ್ಲಿ ಹೂಳೆತ್ತುವ ಬಗ್ಗೆ ಈಗಾಗಲೇ ಕಾರ್ಯಯೋಜನೆ ಸಿದ್ಧಪಡಿಸಿ ದ್ದೇವೆ. ಈ ಸಂಬಂಧ ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಇದು ವಿಳಂಬವಾಗಿದೆ. ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಈ ಸಂಬಂಧ ಭೇಟಿಯಾಗುತ್ತೇನೆ. ಎರಡು ಮೂರು ದಿನಗಳ ಒಳಗೆ ಈ ಬಗ್ಗೆ ತೀರ್ಮಾನವನ್ನು ಮಾಡುತ್ತೇವೆ ಎಂದು ವಿವರಿಸಿದರು.
ಒಳನಾಡು ಮೀನುಗಾರಿಕೆ ಕಾರ್ಯಾಗಾರ: ಕರ್ನಾಟಕ ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಗೆ ಸಂಬಂಧಪಟ್ಟ ಹಾಗೆ ಮೊಟ್ಟಮೊದಲ ಕಾರ್ಯಗಾರವನ್ನು ಕರ್ನಾಟಕದಲ್ಲಿ ಆಯೋಜನೆ ಮಾಡಲಾಗಿದೆ. ಮೀನಿನಿಂದ ಬೇರೆ ಬೇರೆ ಉತ್ಪನ್ನಗಳನ್ನ ತಯಾರಿಸುವ ಬಗ್ಗೆ, ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ಬಗ್ಗೆ, ಮೀನುಗಾರಿಕೆಗೆ ಸಂಬಂಧಿ ಸಿದ ವಿವಿಧ ವಿಷಯಗಳ ಕುರಿತು ಇದರಲ್ಲಿ ಚರ್ಚಿಸಲಾಗಿದೆ. ಕರ್ನಾಟಕ ಕರಾವಳಿಯಲ್ಲಿ ಸಿಗುವ ಮೀನುಗಳನ್ನು ಮಾರುಕಟ್ಟೆ ಮಾಡುವ ಮತ್ತು ರಫ್ತು ಮಾಡುವ ಬಗ್ಗೆ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಇದರೊಂದಿಗೆ ಕೃತಕ ಮತ್ತು ನೈಸರ್ಗಿಕ ಮೀನುಗಾರಿಕೆಯ ಬಗ್ಗೆ ಕಾರ್ಯಗಾರ ದಲ್ಲಿ ಚರ್ಚೆಗಳನ್ನು ಮಾಡಲಾಗಿದೆ. ಸಿಹಿನೀರಿನ ಮೀನುಗಾರಿಕೆ ಕೃತಕ ಮೀನುಗಾರಿಕೆ ಬಗ್ಗೆ ಕೂಡ ಯೋಜನೆಗಳನ್ನು ಮಾಡಲಾಗಿದೆ. ವಿಶ್ವದಲ್ಲೇ ಭಾರತವನ್ನು ಅತಿ ಹೆಚ್ಚು ಮೀನು ಉತ್ಪಾದನೆ ಮಾಡುವ ಮತ್ತು ರಫ್ತು ಮಾಡುವ ದೇಶ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯನ್ನು ಜಾರಿಗೊಳಿಸುವ ಬಗ್ಗೆ ನಾವು ಯೋಜನೆ ರೂಪಿಸಿದ್ದೇವೆ. ದೇಶದಲ್ಲೇ ಕರ್ನಾಟಕವನ್ನು ಮೀನುಗಾರಿಕೆ ಉತ್ಪಾದನೆ ಮತ್ತು ರಫ್ತು ವಿಚಾರದಲ್ಲಿ ದೇಶದಲ್ಲಿ ನಂಬರ್ ಒನ್ ಮಾಡಬೇಕು ಎಂಬ ಉದ್ದೇಶವನ್ನ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಮೀನು ತ್ಯಾಜ್ಯಗಳ ಬಳಕೆ: ಫಿಶ್‌ಮಿಲ್‌ಗಳಲ್ಲಿ ಮೀನು ಸಂಸ್ಕರಣೆ, ರಫ್ತು ಮಾಡುವ ಸಂದರ್ಭ ಬಹಳ ತ್ಯಾಜ್ಯಗಳು ಉಳಿಯುತ್ತವೆ. ತ್ಯಾಜ್ಯಗಳನ್ನ ಬಳಸಿ ಬಯೋಡೇಜಿಲ್ ಮಾಡುವ ಬಗ್ಗೆ ಚಿಂತನೆ ಇದೆ. ಮುಲ್ಕಿಯಲ್ಲಿರುವ ಮೀನುಗಾರಿಕಾ ಇಲಾಖೆಯ ಸಂಬಂಧ ಪಟ್ಟ ಜಮೀನಿನಲ್ಲಿ ಇದರ ಸಂಶೋಧನೆ ನಡೆಯುತ್ತಿದೆ. ಮುಂದಿನ ಜನವರಿ ತಿಂಗಳ ಒಳಗೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮೀನು ಮಾರುಕಟ್ಟೆಯನ್ನು ವಿಸ್ತರಿಸುವ ಬಗ್ಗೆ ಸರಕಾರ ಹಾಗೂ ಇಲಾಖೆ ಕಾರ್ಯ ಯೋಜನೆಯನ್ನು ರೂಪಿಸಿದೆ. ಮೀನಿಗೆ ಬೆಲೆ ನಿಗದಿಪಡಿಸುವ ಬಗ್ಗೆ ಚಿಂತನೆ ಇದೆ. ಮೀನಿನಿಂದ ಸಿಗುವ ಎಲ್ಲಾ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಆಲೋಚನೆ ಇದೆ. ಇದಕ್ಕೆ ಎಲ್ಲ ಮೂಲಭೂತ ವ್ಯವಸ್ಥೆಗಳನ್ನು ಮಾಡುತ್ತೇವೆ. ಜನತೆಗೆ ಮುಕ್ತ ಅವಕಾಶ ಇದೆ. ರಾಜ್ಯ ಮತ್ತು ದೇಶದ ಅಭಿವೃದ್ಧಿಯಲ್ಲಿ ಜನತೆಯ ಪಾಲು ಕೂಡಾ ಇದ್ದು, ಅವರೂ ಈ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದರು.
ಕೆಮ್ಮಣ್ಣು ತೂಗುಸೇತುವೆ
ಗುಜರಾತ್ ಸೇತುವೆ ಕುಸಿತದ ಹಿನ್ನೆಲೆಯಲ್ಲಿ ದುರ್ಬಲಗೊಂಡಿರುವ ಕೆಮ್ಮಣ್ಣು ತೂಗು ಸೇತುವೆಯ ದುರಸ್ಥಿ ಬಗ್ಗೆ ಪ್ರಶ್ನಿಸಿದಾಗ, ಅದರಲ್ಲಿ ಯಾವ ತಾಂತ್ರಿಕ ಸಮಸ್ಯೆಗಳು ಇವೆ ಗೊತ್ತಿಲ್ಲ. ಅಧಿಕಾರಿಗಳ ಬಳಿ ನಾನು ಮಾಹಿತಿಗಳನ್ನು ಪಡೆದುಕೊಳ್ಳುತ್ತೇನೆ. ತೂಗು ಸೇತುವೆಯಲ್ಲಿ ನೂರಾರು ಪ್ರವಾಸಿಗರು ಜಮಾಯಿಸುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳಿಂದ ಮತ್ತು ಪೊಲೀಸರಿಂದ ಮಾಹಿತಿ ಪಡೆದುಕೊಳ್ಳು ತ್ತೇನೆ. ನಿಯಮಬಾಹಿರ ಘಟನೆಗಳು ನಡೆದರೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಪ್ರತ್ಯೇಕ ಕಲ್ಯಾಣ ಕರ್ನಾಟಕಕ್ಕೆ ಬೇಡಿಕೆ ವಿಚಾರ ಪ್ರತ್ಯೇಕತೆಗೆ ಯಾರು ಕೂಡ ಬೇಡಿಕೆ ಇಡಬಾರದು. ಸಮಗ್ರತೆ ಏಕೀಕರಣ ಐಕ್ಯತೆಯಿಂದ ನಾವೆಲ್ಲರೂ ಇರಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
"ನ.3ಕ್ಕೆ ಕ್ಯಾಬಿನೆಟ್ ಸಚಿವರ ಸಭೆ ಇದೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ಮೀನುಗಾರಿಕೆ ಮತ್ತು ಬಂದರು ಇಲಾಖೆ ಇಲಾಖೆಗೆ ಸಂಬಂಧಪಟ್ಟಂತೆ ಎರಡು ಮೂರು ತಿಂಗಳಲ್ಲಿ ನಾಲ್ಕು ಯೋಜನೆಗಳು ಆರಂಭವಾಗಲಿದೆ. ನನಗೆ ಕೊಟ್ಟ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ಬಂದರು ಮತ್ತು ಮೀನುಗಾರಿಕೆಯ ಸಂಬಂಧ ಪಟ್ಟ ಹಾಗೆ ಎಲ್ಲಾ ಜಿಲ್ಲೆಗಳಿಗೆ ಸಮಾನ ಆದ್ಯತೆ ನೀಡಲಾಗುವುದು".
-ಎಸ್.ಅಂಗಾರ, ಜಿಲ್ಲಾ ಉಸ್ತುವಾರಿ ಸಚಿವ.







