ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಧರಣಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಸುರತ್ಕಲ್ : ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ನಡೆಸುತ್ತಿರುವ ಆಹೋರಾತ್ರಿ ಧರಣಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ದಲಿತ ಚಳವಳಿಯ ಹಿರಿಯ ಹೋರಾಟಗಾರ ಎಂ. ದೇವದಾಸ್ ಅವರು ಧ್ವಜಾರೋಹಣಗೈದರು.
ಈ ಸಂದರ್ಭ ಟೋಲ್ ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ದಿನೇಶ ಹೆಗ್ಡೆ ಉಳೆಪಾಡಿ, ಮಂಜುಳಾ ನಾಯ್ಕ್, ವಸುಂತಾ ಡಿಸೋಜಾ, ಹೋರಾಟ ಸಮಿತಿಯ ಸಹಸಂಚಾಲಕ ರಮೇಶ್, ಬಿ.ಕೆ.ಇಮ್ತಿಯಾಝ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಧರಣಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ "ಟೋಲ್ ಗೆಟ್ ಕವಿತೆಗಳು" ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಿಲ್ಸನ್ ಕಟೀಲ್ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಹಿರಿಯ ಕವಿ ಮುಹಮ್ಮದ್ ಬಡ್ಡೂರು, ಜೊಸ್ಸಿ ಪಿಂಟೊ ಕಿನ್ನಿಗೋಳಿ, ಅಶುಂತ ಡಿಸೋಜಾ, ನವೀನ್ ಪಿರೇರಾ ಸುರತ್ಕಲ್, ಸಂವರ್ಥ ಸಾಹಿಲ್, ಹುಸೈನ್ ಕಾಟಿಪಳ್ಳ, ಎಂ.ಜಿ. ಹೆಗ್ಡೆ ಹಾಗೂ ಜಲೀಲ್ ಮುಕ್ರಿಯವರ ಅವರ ಕವನಗಳನ್ನು ವಿನೀತ್ ದೇವಾಡಿಗ ಪ್ರಸ್ತುತ ಪಡಿಸಿದರು.
ಮುಹಮ್ಮದ್ ಬಡ್ಡೂರು ಅವರ "ನಮಗೆ ನ್ಯಾಯ ಬೇಕು, ನಿಮ್ಮ ಸುಖಕ್ಕೆ ನಾವ್ಯಾಕೆ ಸಾಯಬೇಕು" ಕವಿತೆ ಜನಮೆಚ್ಚುಗೆ ಪಡೆಯಿತು.
ಕವಿಗೋಷ್ಠಿಯ ಬಳಿಕ ಮಾತನಾಡಿದ ಮುನೀರ್ ಕಾಟಿಪಳ್ಳ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಮ್ಮ ಸಂಸದರೇ ಆಗಿದ್ದರೆ, ಅವರಲ್ಲಿ ನಾನೊಬ್ಬ ಲೋಕಸಭಾ ಸದಸ್ಯ ಜನಪ್ರತಿನಿಧಿ ಎಂಬ ಪ್ರಜ್ಞೆ ಇದ್ದರೆ, ಅವರೆ ಹೇಳಿರುವಂತೆ ನ.7ಕ್ಕೆ ಟೋಲ್ ಗೇಟ್ ತೆರವು ಗೋಳಿಸಿ. ಇಲ್ಲವೇ ರಾಜೀನಾಮೆ ನೀಡಿ ನಮ್ಮೊಂದಿಗೆ ಹೋರಾಟದಲ್ಲಿ ಸೇರಿಕೊಳ್ಳಿ ಎಂದು ಸವಾಲೆಸೆದರು.
ಬಿಜೆಪಿಯ ನಾಯಕರು, ಶಾಸಕರು, ಸಂಸದರನ್ನು ಹೊರತು ಪಡಿಸಿ ಸಾಮಾನ್ಯ ಕಾರ್ಯಕರ್ತರು ನಮ್ಮೊಂದಿಗೆ ಹೋರಾಟದಲ್ಲಿ ಇದ್ದಾರೆ ಎಂದು ಹೋರಾಟಕ್ಕೆ ಬಿಜೆಪಿಯ ಬೆಂಬಲದ ಕುರಿತ ಪತ್ರಕರ್ತರ ಪ್ರಶ್ನೆಗೆ ಮುನೀರ್ ಉತ್ತರಿಸಿದರು.
ಧರಣಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಸತತ ಐದನೇ ದಿನವೂ ಟೋಲ್ ಗೇಟ್ ತೆರವು ಹೋರಾಟ ವೇದಿಕೆಗೆ ಆಗಮಿಸಿ ಬೆಂಬಲ ಸೂಚಿಸಿದರು. ಸುರತ್ಕಲ್ ಟೋಲ್ ತೆರವಿಗೆ ಆಗ್ರಹಿಸಿ ಹೋರಾಟ ಸಮಿತಿ ನಡೆಸಿತ್ತಿರುವ ಆಹೋರಾತ್ರ ಧರಣಿಗೆ ಬೀದಿ ಬದಿ ವ್ಯಾಪಾರಿಗಳು ಬೆಂಬಲಿಸಿ, ಹಣ್ಣು ಹಂಪಲು ಸಹಿತ ಬಂದು ಧರಣಿಯಲ್ಲಿ ಭಾಗಹಿಸಿದರು.
ಧರಣಿ ಸತ್ಯಾಗ್ರಹಕ್ಕೆ ಮಂಗಳೂರು ಜನಪರ ವಕೀಲರ ತಂಡ ಬೆಂಬಲಿಸಿ ಇಂದಿನ ಧರಣಿಯಲ್ಲಿ ಭಾಗಿಗಳಾದರು. ಈ ಸಂದರ್ಭ ಇಬ್ರಾಹಿಂ, ಯಶವಂತ ಮರೋಳಿ, ಎಸ್ ಪಿ ಚೆಂಗಪ್ಪ, ಟಿ ನಾರಾಯಣ ಪೂಜಾರಿ, ಶಾಲಿನಿ, ವಸಂತ ಕಾರಂದೂರು, ರಾಮಚಂದ್ರ ಬಬ್ಬುಕಟ್ಟೆ, ನಿತಿನ್ ಕುತ್ತಾರ್, ಚರಣ್ ಶೆಟ್ಟಿ, ದಿನೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.