ಆಪ್ ಕಾರ್ಯ ಶ್ಲಾಘಿಸಿದ ವ್ಯಕ್ತಿಗೆ ಮನಪಾ ಉಪ ಮೇಯರ್ ಪತಿಯಿಂದ ಬೆದರಿಕೆ: ಆಪ್ ರಾಜ್ಯಾಧ್ಯಕ್ಷ ಆರೋಪ

ಮಂಗಳೂರು, ನ.2: ನಗರದಲ್ಲಿ ನಿನ್ನೆ ಆಮ್ ಆದ್ಮಿ ಪಕ್ಷದ ಕಾರ್ಯಕ್ರಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಈಡೇರದ ಬೇಡಿಕೆ ಆಪ್‌ನಿಂದ 24 ಗಂಟೆಗಳಲ್ಲಿ ಈಡೇರಿದೆ ಎಂಬುದಾಗಿ ಶ್ಲಾಘಿಸಿದ ನಗರದ ನಾಗರಿಕರೊಬ್ಬರಿಗೆ ಉಪ ಮೇಯರ್ ಪತಿ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡುವುದಾಗಿ ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸೆಂಟ್ರಲ್ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಆಪ್ ನಾಗರಿಕರ ಗ್ರೀವೆನ್ಸ್ ಪೋರ್ಟಲ್‌ಗೆ ನಾಗರಿಕರೊಬ್ಬರು ದೂರು ಹೇಳಿಕೊಂಡಿದ್ದರು. ಅವರ ಸಮಸ್ಯೆಯನ್ನು ಪಕ್ಷದ ಪ್ರತಿನಿಧಿಗಳು ಸ್ಪಂದಿಸಿ 24 ಗಂಟೆಯಲ್ಲಿ ಪರಿಹಾರ ಒದಗಿಸಿದ್ದರು. ಈ ಬಗ್ಗೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಆ ನಾಗರಿಕರು ಆಗಮಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂದು ಬೆಳಗ್ಗೆ ಮನಪಾ ಉಪ ಮೇಯರ್‌ರವರ ಪತಿ ಆ ವ್ಯಕ್ತಿಗೆ ಕರೆ ಮಾಡಿ ನಿಂದಿಸಿ, ಮನೆ ಒಳಗೆ ಬಂದು ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಅವರನ್ನು ಮುಟ್ಟಿದರೆ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದರು.
ಶೂನ್ಯ ಭ್ರಷ್ಟಾಚಾರ, ಶೇ. 100 ಕಾಮಗಾರಿ ಎಂಬ ಘೋಷಣೆಯೊಂದಿಗೆ ಆಮ್ ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಕಾರ್ಯಾಚರಿಸಲಿದೆ. ಮುಂಬರುವ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಆಯಾ ಪ್ರದೇಶದ ಸಮಸ್ಯೆಗಳಿಗೆ ಅನುಗುಣವಾಗಿ ಪ್ರಣಾಳಿಕೆಯನ್ನು ಪಕ್ಷ ಬಿಡುಗಡೆ ಮಾಡಲಿದೆ. ರಾಜ್ಯದಲ್ಲಿ ಮೂರು ಪ್ರಮುಖ ಪಕ್ಷಗಳಿದ್ದರೂ ಅವುಗಳ ರಾಜಕೀಯ ಒಂದೇ ಎಂಬಂತಾಗಿದೆ. ಇದಕ್ಕೆ ಪರ್ಯಾಯ ಪಕ್ಷದ ಅಗತ್ಯವನ್ನು ಜನತೆಯೂ ಅರಿತುಕೊಂಡಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ತಾವು ಕೆಲಸ ಕಾರ್ಯಗಳನ್ನು ನಡೆಸುವುದಾಗಿ ಪೃಥ್ವಿ ರೆಡ್ಡಿ ಹೇಳಿದರು.
ದೇಶದಲ್ಲಿ ಸುಮಾರು 40 ವರ್ಷಗಳಿಂದ ರಾಜಕೀಯದಲ್ಲಿರುವ ಅಮಿತ್ ಶಾ ಯಾವುದೇ ಶಾಲೆಗೆ ಭೇಟಿ ನೀಡಿಲ್ಲ. ಇದೀಗ ಬಿಜೆಪಿ ಮಾದರಿ ರಾಜ್ಯವೆಂದು ಹೇಳುತ್ತಿದ್ದು ಪ್ರಧಾನಿ ಮೋದಿಯವರ ಗುಜರಾತ್‌ನಲ್ಲಿಯೇ ಮಕ್ಕಳ ಕಲಿಕಾ ಸೂಚ್ಯಂಕವು ತಳಮಟ್ಟದಲ್ಲಿರುವುದು ಬಹಿರಂಗಗೊಂಡಾಗ ಶಾಲೆಗೆ ಭೇಟಿ ನೀಡುವ ಕಾರ್ಯಕ್ರಮ ನಡೆಸಲಾಗಿದೆ. ಕರ್ನಾಟಕದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಲು ಮಕ್ಕಳಿಂದಲೇ 100 ರೂ. ಸಂಗ್ರಹಿಸಲು ಮುಂದಾಗಿರುವ ಸರಕಾರದ ನಡೆ ನಾಚಿಕೆಗೇಡು ಎಂದು ಜಿಲ್ಲಾಧ್ಯಕ್ಷ ಸಂತೋಷ ಕಾಮತ್ ಹೇಳಿದರು.ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಸಮಾಜದಲ್ಲಿ ಜಾತಿ, ಧರ್ಮ ಎಂಬುದು ವಾಸ್ತವ. ಆದರೆ ಬೇರೆ ಪಕ್ಷಗಳು ಸಮಾಜವನ್ನು ಧರ್ಮ ದ್ವೇಷದಿಂದ ವಿಭಜಿಸುತ್ತಿದೆ. ನಾವು ಹಿಂದೂ ಎಂದು ಗುರುತಿಸಲು ಬಿಜೆಪಿಯ ಸರ್ಟಿಫಿಕೇಟ್ ಬೇಕಾಗಿಲ್ಲ. ಧರ್ಮದ ಬಗ್ಗೆ ಮಾತನಾಡಿದ ತಕ್ಷಣ ನಾವು ಬಿಜೆಪಿಯವರ ತರ ಎಂದು ಹೇಳುವುದು ತಪ್ಪು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ದ.ಕ. ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್, ರಾಜ್ಯ ಕಾರ್ಯದರ್ಶಿ ಹಾಗೂ ವಲಯ ಸಂಯೋಜಕ ವಿವೇಕಾನಂದ ಸಲಿನ್ಸ್, ಜಿಲ್ಲಾ ಮಾದ್ಯಮ ಸಂಚಾಲಕ ವೆಂಕಟೇಶ್ ಬಾಳಿಗಾ, ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ ಎಡಮಲೆ ಮತ್ತು ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ ಪಿ.ಕೆ. ಉಪಸ್ಥಿತರಿದ್ದರು.